ಸ್ವಾಭಿಮಾನ V/s ಅಭಿವೃದ್ಧಿ ಜಪ

| ಮಾದರಹಳ್ಳಿ ರಾಜು, 

ಮಂಡ್ಯ: ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಷ್ ಸ್ಪರ್ಧೆಯಿಂದಾಗಿ ದೇಶದ ಹೈ-ವೋಲ್ಟೆಜ್ ಕ್ಷೇತ್ರವಾಗಿ ಗಮನ ಸೆಳೆಯುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನದ ಪ್ರತಾಪ ಹಾಗೂ ಅಭಿವೃದ್ಧಿ ಜಪದ ನಡುವೆ ಕದನ ನಡೆಯುತ್ತಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಜಿಲ್ಲೆಯಲ್ಲಿ ನಗಣ್ಯವಾಗಿದ್ದು, ‘ಕೈ’ ಕಾರ್ಯಕರ್ತರು ‘ತೆನೆ’ ಮುಟ್ಟಲು ನಿರಾಕರಿಸಿದ್ದಾರೆ. ದೇಶದೆಲ್ಲೆಡೆ ಶತ್ರುಗಳಂತೆ ಕಾಳಗ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಇಲ್ಲಿ ದೋಸ್ತಿಯಾಗಿ ಪಕ್ಷೇತರ ಅಭ್ಯರ್ಥಿ ಪರ ಕಹಳೆ ಮೊಳಗಿಸಿವೆ. ಜತೆಗೆ ಜಿಲ್ಲೆಯಲ್ಲಿ ಪ್ರಬಲವಾಗಿರುವ ರೈತಸಂಘ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆಗಳು ಕೂಡ ಪಕ್ಷೇತರ ಅಭ್ಯರ್ಥಿ ಬೆನ್ನಿಗೆ ನಿಂತಿವೆ.

ಜೆಡಿಎಸ್​ನ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಮೂವರು ಸಚಿವರು, 5 ಶಾಸಕರು, 3 ವಿಧಾನಪರಿಷತ್ ಸದಸ್ಯರು, ಜಿಪಂ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಆದರೂ ಅಂಬಿ ಅಭಿಮಾನ, ಜಿಲ್ಲೆಯ ಸ್ವಾಭಿಮಾನ ಎಂಬ ಪ್ರಮುಖ ಅಸ್ತ್ರಗಳ ವಿರುದ್ಧ ಸಿಎಂ ಸೇರಿ ಎಲ್ಲರೂ ಬೆವರು ಬಸಿಯಬೇಕಾದ ಸನ್ನಿವೇಶ ನಿರ್ವಣವಾಗಿದೆ. ಗುಪ್ತದಳದ ವರದಿ, ಜಿಲ್ಲೆಯೆಲ್ಲೆಡೆ ಸುಮಲತಾ ಅಂಬರೀಷ್ ಪರ ವ್ಯಕ್ತವಾಗುತ್ತಿರುವ ಬೆಂಬಲ ಕಂಡಿರುವ ಸಿಎಂ ಸೇರಿ ಜೆಡಿಎಸ್ ನಾಯಕರು ಅಭಿಮಾನ, ಸ್ವಾಭಿಮಾನದ ಕೊಂಡಿಗಳನ್ನು ಕತ್ತರಿಸಲು ಸಾಕಷ್ಟು ತಂತ್ರಗಾರಿಕೆ ಮಾಡುತ್ತಿದ್ದಾರೆ. ಅದು ಯಾವ ರೀತಿ ಫಲ ನೀಡುತ್ತದೆ ಎಂಬುದನ್ನು ಊಹಿಸಲಾಗದು.

ಸುಮಲತಾ ಅಂಬರೀಷ್ ಪರ ಖ್ಯಾತ ಚಿತ್ರನಟರಾದ ದರ್ಶನ್, ಯಶ್ ಕ್ಷೇತ್ರದೆಲ್ಲೆಡೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಅವರು ಹೋದೆಡೆಯೆಲ್ಲ ಅಭಿಮಾನಿಗಳ ಸಾಗರವೇ ಬಂದು ಸ್ವಾಗತಿಸಿ, ಜೈ ಕಾರ ಮೊಳಗಿಸಿದೆ. ಆದರೆ ಅದು ಮತಗಳಾಗಿ ಪರಿವರ್ತನೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ರೈತಪ್ರಧಾನ ಆಗಿರುವ ಜಿಲ್ಲೆಯಲ್ಲಿ ಸಮಸ್ಯೆಗಳ ಸಂತೆ

ರೈತರೇ ಅಧಿಕವಾಗಿರುವ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಪ್ರಮುಖವಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಟವಾಡೆ ಮಾಡದಿರುವುದು. ಈತನಕ ಯಾವ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿಲ್ಲ. ಇದು ಪ್ರತಿ ವರ್ಷ ಪುನರಾವರ್ತನೆ ಆಗುತ್ತಿದ್ದು, ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯೂ ಪ್ರಮುಖ ಉದ್ಯಮವಾಗಿದ್ದು, ರಾಜ್ಯದಲ್ಲೇ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಇಡೀ ರಾಜ್ಯದಲ್ಲೇ ಕಡಿಮೆ ದರ ಸಿಗುತ್ತಿರುವ ಜಿಲ್ಲೆ ಮಂಡ್ಯ. ಅಂತೆಯೇ ರೇಷ್ಮೆ ಬೆಳಗಾರರು ಕೂಡ ಹೆಚ್ಚಾಗಿದ್ದು, ದರ ಕುಸಿತ ರೈತರನ್ನು ಕಂಗಾಲಾಗಿಸಿದೆ. ಬಹುತೇಕ ಗ್ರಾಮೀಣ ರಸ್ತೆಗಳು ಮೋರಿಗಳಂತಾಗಿವೆ. ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ಕೋಟ್ಯಂತರ ರೂ. ಸುರಿಯುತ್ತಿದೆ. ಬಹುತೇಕ ಕೆರೆಗಳ ಚಿತ್ರಣ ಕಿಂಚಿತ್ತೂ ಬದಲಾಗಿಲ್ಲ. ಅಕ್ರಮ ಕಲ್ಲು ಗಣಿಗಾರಿಕೆ, ಮರಳುಗಾರಿಕೆ ವಿರುದ್ಧ ಜನರ ಆಕ್ರೋಶ ತೀವ್ರವಾಗಿದೆ. ಕೃಷಿಯಲ್ಲಿ ಯಾವುದೇ ಲಾಭವಿಲ್ಲ ಎಂಬ ಕಾರಣದಿಂದ ಜಿಲ್ಲೆಯ ಮಹಿಳೆಯರು ಈಗ ಗಾರ್ವೆಂಟ್ಸ್​ಗಳಿಗೆ ಹೋಗುತ್ತಿದ್ದಾರೆ. ಕೃಷಿಗೆ ಪೂರಕವಾಗುವ ಯಾವುದೇ ಕಾರ್ಖಾನೆಗಳ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಿಲ್ಲ. ಮಳವಳ್ಳಿಗೆ ರೈಲ್ವೆ ಮಾರ್ಗ ಬರುವ ಕನಸು ಈಡೇರಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ನಡೆಯುತ್ತಿವೆ. ಕೆಲ ರಸ್ತೆಗಳಲ್ಲಿನ ಕಾಮಗಾರಿ ಬಗ್ಗೆ ಆಕ್ಷೇಪಗಳಿವೆ.

ಕಣದಲ್ಲಿ 22 ಕಲಿಗಳು

ಮಂಡ್ಯ ಕ್ಷೇತ್ರದಲ್ಲಿ 22 ಸ್ಪರ್ಧಿಗಳಿದ್ದಾರೆ. ಮೈತ್ರಿ ಅಭ್ಯರ್ಥಿ ಕೆ.ನಿಖಿಲ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಬಿಎಸ್​ಪಿ ನಂಜುಂಡಸ್ವಾಮಿ, ಇಂಡಿಯನ್ ನ್ಯೂ ಕಾಂಗ್ರೆಸ್​ನ ಗುರುಲಿಂಗಯ್ಯ, ಐಹ್ರಾ ನ್ಯಾಷನಲ್ ಪಾರ್ಟಿ ಜಯಶಂಕರ್, ಉತ್ತಮ ಪ್ರಜಾಕೀಯ ಪಾರ್ಟಿ ಸಿ.ಪಿ.ದಿವಾಕರ್, ಇಂಜಿನಿಯರ್ಸ್ ಪಾರ್ಟಿ ಎಚ್.ಪಿ.ಸಂತೋಷ್, ಅರವಿಂದ ಪ್ರೇಮಾನಂದ್, ಕೌಡ್ಲೆ ಚನ್ನಪ್ಪ, ತುಳಸಪ್ಪ ದಾಸರ, ಎಚ್.ನಾರಾಯಣ್, ಎಸ್.ಪಿ.ಪುಟ್ಟರಾಜು, ಪ್ರೇಮ್ುಮಾರ್, ಬಿ.ಮಂಜುನಾಥ್, ಜಿ.ಮಂಜುನಾಥ್, ಎಸ್.ಎಚ್.ಲಿಂಗೇಗೌಡ, ಸಿ.ಲಿಂಗೇಗೌಡ, ಎಂ.ಎಲ್.ಶಶಿಕುಮಾರ್, ಟಿ.ಎನ್.ಸತೀಶ್​ಕುಮಾರ್, ಸುಮಲತಾ, ಎಂ.ಸುಮಲತಾ, ಪಿ.ಸುಮಲತಾ ಕಣದಲ್ಲಿದ್ದಾರೆ.

ಕಹಳೆ ಊದುವರೇ ರೆಬೆಲ್ಸ್?

ದೋಸ್ತಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಸೇರಿ ಪರಾಜಿತರು ಕಡೇ ದಿನಗಳಲ್ಲಿ ಬೀದಿಗಿಳಿದು ಕಹಳೆ ಮೊಳಗಿಸುವರೇ ಅಥವಾ ತೆರೆಮರೆಯಲ್ಲೇ ಆಟ ಆಡುವರೇ ಎಂಬುದು ಕುತೂಹಲ ಕೆರಳಿಸಿದೆ.

ಅಭಿವೃದ್ಧಿಯ ಮಾತುಗಳಿಲ್ಲ

ಚುನಾವಣಾ ಪ್ರಚಾರದ ಉದ್ದಕ್ಕೂ ಜಿಲ್ಲೆಯ ಅಭಿವೃದ್ಧಿಗಿಂತ ಹೆಚ್ಚಾಗಿ ವೈಯಕ್ತಿಕ ಟೀಕೆಗಳೇ ರಿಂಗಣಿಸಿದವು. ಕೆ.ಟಿ.ಶ್ರೀಕಂಠೇಗೌಡ, ಸಚಿವರಾದ ರೇವಣ್ಣ, ತಮ್ಮಣ್ಣರಿಂದ ಶುರುವಾಗಿ ಸಂಸದ ಎಲ್.ಆರ್.ಶಿವರಾಮೇಗೌಡ ಪದೇಪದೆ ವಿವಾದಾತ್ಮಕ ಹೇಳಿಕೆ ನೀಡಿದರು. ಸಿಎಂ ಕುಮಾರಸ್ವಾಮಿ ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಿದ್ದು, ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ನೆರವಾಗಿದ್ದ ಮಾತುಗಳನ್ನೇ ಪುನರುಚ್ಚರಿಸಿದರಲ್ಲದೆ ಸುಮಲತಾ, ಚಿತ್ರನಟರ ವಿರುದ್ಧ ಗುಡುಗಿದ್ದೇ ಹೆಚ್ಚಾಗಿತ್ತು. ಕೆಲವೆಡೆ ಮೈಶುಗರ್, ಡಿಸ್ನಿಲ್ಯಾಂಡ್ ಜಪ ಮಾಡಿದರು.

ಹಣದ ಹೊಳೆ

ಕ್ಷೇತ್ರದಲ್ಲಿ ಹಣದ ದೊಡ್ಡ ಸುನಾಮಿ ಎದ್ದಿದೆ. ಹಣ ಹಂಚಿಕೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಪಾತ್ರ ಕಡಿಮೆಯೇನಿಲ್ಲ. ಆದರೆ, ಆಡಳಿತಾರೂಢ ಪಕ್ಷದ ಅಲೆ ಜೋರಾಗಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಗುತ್ತಿಗೆದಾರರು, ನಂಬಿಕಸ್ಥ ಸ್ಥಳೀಯ ಮುಖಂಡರ ಕೈಗೆ ತಲುಪಿಸಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಹಣದ ಮೂಲಗಳು, ಹಣ ತಲುಪಿಸುವುದು, ಹಣ ಹಂಚುವುದು ಬಹಿರಂಗವಾಗಿ ಕಾಣಿಸಿದರೂ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂಬುದು ಕ್ಷೇತ್ರದಲ್ಲಿ ಕಂಡುಬರುತ್ತಿದೆ.

ಜಿಲ್ಲೆ ಸಾಕಷ್ಟು ಹಿಂದುಳಿದಿದೆ. ಸಮಗ್ರ ಅಭಿವೃದ್ಧಿಗಾಗಿ ನನ್ನ ತಂದೆ 9 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಜಿಲ್ಲೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು. ಜಿಲ್ಲೆಯ ಜನರ ಋಣ ನನ್ನ ತಾತ-ತಂದೆ ಮೇಲಿದೆ. ಅದನ್ನು ತೀರಿಸಲು ಜಿಲ್ಲೆಗೆ ಬಂದಿದ್ದು, ಜನ ಆಶೀರ್ವದಿಸುವ ವಿಶ್ವಾಸವಿದೆ.

| ನಿಖಿಲ್ ಕುಮಾರಸ್ವಾಮಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ

ಅಧಿಕಾರದ ಆಸೆ ಇದ್ದಿದ್ದರೆ ಅವರೇ ಹೇಳಿದಂತೆ ಎಂಎಲ್​ಸಿ ಆಗಿ, ಮಂತ್ರಿ ಆಗುತ್ತಿದ್ದೆ. ಪತಿ ಅಗಲಿಕೆ ಬಳಿಕ ಜಿಲ್ಲೆಯ ಜನತೆ ರಾಜಕಾರಣಕ್ಕೆ ಆಹ್ವಾನಿಸಿದ್ದರಿಂದ ಅಂಬರೀಷ್ ಆಶಯಗಳನ್ನು ಈಡೇರಿಸಲು ಬಂದಿದ್ದೇನೆ. ಆದರೆ ನನಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ.

| ಸುಮಲತಾ ಅಂಬರೀಷ್, ಪಕ್ಷೇತರ ಅಭ್ಯರ್ಥಿ