ಉಪಚುನಾವಣೆಯಲ್ಲಿ ಉತ್ಸಾಹವೇ ಇಲ್ಲ ಎಂದ ನಟ ಅಂಬರೀಷ್

ಮಂಡ್ಯ: ಈ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ. ನಮ್ಮ ತಮ್ಮಣ್ಣ ಅವರ ಊರು ಅಂತ ಇಲ್ಲಿ ಉತ್ಸಾಹ ಇದೆ. 11ನೇ ತಾರೀಖು ಬನ್ನಿ ಎಲ್ಲ ಹೇಳುತ್ತೇನೆ ಎಂದು ನಟ, ಮಾಜಿ ಸಚಿವ ಅಂಬರೀಷ್‌ ಹೇಳಿದರು.

ಐದಕ್ಕೆ ಐದು ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲಲಿದೆ. ಚುನಾವಣೆ ಆಗುತ್ತಿರುವುದು ಸರಿ ಇಲ್ಲ. ಮೂರು ತಿಂಗಳಿಗಾಗಿ ಚುನಾವಣೆ ನಡೆಯುತ್ತಿದೆ. ನಂತರ ಮತ್ತೆ ಚುನಾವಣೆ ಬರಲಿದ್ದು, ಈ ಚುನಾವಣೆ ಸರಿ ಇಲ್ಲ ಎಂದರು.

ರಾಮನಗರ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬೆಳವಣಿಗೆಯೇ ಸರಿ ಇಲ್ಲ. ಆಂತರಿಕವಾಗಿ ಏನಾಗಿದೆ, ಮಾತುಕತೆ ಏನೂ ಎಂಬುದು ಗೊತ್ತಿಲ್ಲ. ಮನಸ್ತಾಪ ಇಲ್ಲ ಬೇರೆ ಥರಹ ಏನೋ ಆಗಿದೆ. ಯಾವುದೋ ಮನಸ್ತಾಪದಿಂದ ಹೀಗೆ ಆಗಿದೆ ಅಷ್ಟೆ. ಜೆಡಿಎಸ್ ಅಭ್ಯರ್ಥಿ 5 ಲಕ್ಷಕ್ಕೂ ಹೆಚ್ಚು ಮತ ಪಡೆದು ಗೆಲ್ಲುತ್ತಾರೆ. ರೆಕಾರ್ಡ್‌ನಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ. ನಾನೂ ರೆಸ್ಟ್‌ನಲ್ಲಿ ಇದ್ದೇನೆ, ಇಲ್ಲವಾಗಿದ್ದರೆ ನಾನೇ ಚುನಾವಣೆಗೆ ಬರುತ್ತಿದ್ದೆ. ಬೇರೆ ಅವ್ರು ಯಾಕೆ ಬರುತ್ತಾರೆ ಎಂದು ಹೇಳಿದರು.

ಅಂಬಿಗೆ ಬೆಳಕಿನ ಸಮಸ್ಯೆ

ಸ್ವಗ್ರಾಮ ಮಂಡ್ಯದ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ನಟ ಅಂಬರೀಶ್ ಮತ ಚಲಾವಣೆ ಮಾಡಿದರು. ಮತದಾನದ ವೇಳೆ ಬೆಳಕಿನ ಸಮಸ್ಯೆ ಎದುರಾಗಿದ್ದರಿಂದ ಏ… ಕಾಣ್ತಿಲ್ಲ. ಟಾರ್ಚ್ ತನ್ರೋ ಎಂದು ಹೇಳಿದರು. ಅಂಬರೀಷ್‌ ಕೂಗುತ್ತಿದ್ದಂತೆ ಮತಗಟ್ಟೆ ಸಿಬ್ಬಂದಿ ಟಾರ್ಚ್ ತೆಗೆದುಕೊಂಡು ಹೋದರು.

ಮತ ಚಲಾಯಿಸದ ಸುಮಲತಾ

ಅಂಬರೀಶ್ ಪತ್ನಿ ಮತ್ತು ನಟಿ ಸುಮಲತಾ ಅವರು ಮತ ಚಲಾವಣೆಗೆ ಗೈರಾಗಿದ್ದರು. ಮದ್ದೂರು ತಾಲೂಕು ದೊಡ್ಡರಸಿನಕೆರೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಸುಮಲತಾ ಅವರು ಮತದಾನಕ್ಕೆ ಬಂದಿರಲಿಲ್ಲ.

ಸಚಿವ ಡಿ.ಸಿ.ತಮ್ಮಣ್ಣ ಸಾಥ್‌

ರೆಬಲ್ ಸ್ಟಾರ್ ಅಂಬರೀಷ್‌ ಅವರಿಗೆ ಸಾರಿಗೆ ಸಚಿವ ತಮ್ಮಣ್ಣ ಅವರು ಸಾಥ್‌ ನೀಡಿದರು. ದೊಡ್ಡರಸಿನಕೆರೆಯಲ್ಲಿ ಅಂಬಿ ಮತದಾನ ಮಾಡಿದರೆ, ಮತಗಟ್ಟೆ ಸಂಖ್ಯೆ 166ರಲ್ಲಿ ಸಚಿವ ಡಿಸಿ ತಮ್ಮಣ್ಣ ಮತಚಲಾಯಿಸಿದರು.