ಮೂರು ದಿನ ಕಾರ್ಗಿಲ್ ವಿಜಯೋತ್ಸವ

ಮಂಡ್ಯ: ಕಾರ್ಗಿಲ್ ಯುದ್ಧ. ದೇಶದ ಪ್ರತಿ ನಾಗರಿಕರೂ ಹೆಮ್ಮೆ ಪಡುವ ಸಂದರ್ಭ. ಶತ್ರುಗಳ ವಿರುದ್ಧ ಹೋರಾಡಿ ದಿಗ್ವಿಜಯ ಸಾಧಿಸಿದ ಕ್ಷಣವನ್ನು ಪ್ರತಿ ವರ್ಷ ಸಂಭ್ರಮದಿಂದ ಮತ್ತು ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ನಮನ ಸಲ್ಲಿಸಲಾಗುತ್ತದೆ. ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿ ಜೀವಧಾರೆ ಟ್ರಸ್ಟ್ ವಿಶೇಷ ಕಾರ್ಯಕ್ರಮದ ಮೂಲಕ ಆಚರಣೆ ಮಾಡಲು ಸಜ್ಜುಗೊಂಡಿದೆ.

ಆರು ವರ್ಷದಿಂದ ವಿಜಯೋತ್ಸವವನ್ನು ಆಚರಿಸುತ್ತಿದ್ದ ಟ್ರಸ್ಟ್, ಈ ಬಾರಿ ಮೂರು ದಿನ ನಗರದಲ್ಲಿ ಅದ್ದೂರಿಯಾಗಿ ಹಾಗೂ ವಿಭಿನ್ನವಾಗಿ ಆಯೋಜಿಸುತ್ತಿದೆ. ಟ್ರಸ್ಟ್‌ಗೆ ಜಿಲ್ಲೆಯ 25ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡುತ್ತಿವೆ. ವಿಜಯೋತ್ಸವದ ಯಶಸ್ಸಿಗೆ ಯುವಕರು ಹಗಲಿರುಳು ದುಡಿಯುತ್ತಿದ್ದಾರೆ.

ಓ ವೀರ ನಿನಗೇನು ಕೊಟ್ಟೆ?: ವಿಜಯೋತ್ಸವದ ಹಿನ್ನೆಲೆಯಲ್ಲಿ ಬಹುಮುಖ್ಯವಾದ ಕಾರ್ಯಕ್ರಮ ವೀರ ಸೈನಿಕರಿಗೆ ಸನ್ಮಾನ. ಮೂರು ದಿನ ಕಾರ್ಯಕ್ರಮದ ಪೈಕಿ ಕಡೆ ದಿನ ನಿವೃತ್ತ ಮತ್ತು ಒಬ್ಬ ಹಾಲಿ ಸೈನಿಕರನ್ನು ರಾಜ್ಯದ ವಿವಿಧೆಡೆಯಿಂದ ಕರೆಸಿ ಸನ್ಮಾನಿಸಲಾಗುತ್ತಿದೆ. ವಿಶೇಷವೆನಿಸಿರುವ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಲು ‘ಓ ವೀರ ನಾನು ನಿನಗೇನು ಕೊಟ್ಟೆ’ ಎಂಬ ಶೀರ್ಷಿಕೆಯಡಿ ಆಂದೋಲನ ನಡೆಸಲಾಗುತ್ತಿದೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಗಣ್ಯರು ಕೂಡ ತಮ್ಮ ಸಂದೇಶವನ್ನು ಕೊಡುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಾರ್ಥಕ ಶಿಬಿರ ಆಯೋಜನೆ: ಈಗಾಗಲೇ ರಕ್ತದಾನ ಶಿಬಿರಗಳ ಮೂಲಕವೇ ಗುರುತಿಸಿಕೊಂಡಿರುವ ಹಾಗೂ ಟ್ರಸ್ಟ್‌ನ ಮೂಲ ಉದ್ದೇಶವೂ ಆಗಿರುವ ರಕ್ತದಾನವನ್ನು ವಿಜಯೋತ್ಸವದ ನೆನಪಿಗಾಗಿ ಆಯೋಜಿಸಿದೆ. ಈವರೆಗೂ 215 ಶಿಬಿರ ಆಯೋಜಿಸಿದ್ದು, ಈ ಬಾರಿ 1400 ಯುನಿಟ್ ರಕ್ತ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಆದ್ದರಿಂದ, ಸಾಕಷ್ಟು ಪ್ರಚಾರ ಕೂಡ ಮಾಡಲಾಗುತ್ತಿದ್ದು, ಟ್ರಸ್ಟ್‌ನ ಯುವಕರು ಕೂಡ ಇತರರನ್ನು ಪ್ರೇರೇಪಿಸುತ್ತಿದ್ದಾರೆ.

ಅಂತೆಯೇ, ಕಾರ್ಗಿಲ್ ಯುದ್ದದಲ್ಲಿ ಮಡಿದ ವೀರರ ನೆನಪಿನಲ್ಲಿ ದೀಪ ನಮನ ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ತಲಾ 5 ರೂ ನೀಡಿ ದೀಪ ಖರೀದಿಸಿ ನಮನ ಸಲ್ಲಿಸಬೇಕು. ಹಿಂದಿನ ವರ್ಷದಲ್ಲಿ ಈ ರೀತಿ ಸಂಗ್ರಹವಾಗುತ್ತಿದ್ದ ಹಣವನ್ನು ಸೈನಿಕರ ನಿಧಿಗೆ ಕಳುಹಿಸಲಾಗುತ್ತಿತ್ತು. ಈ ಬಾರಿ ಸನ್ಮಾನಕ್ಕೆ ಬರುವ ಸೈನಿಕರಿಗೆ ನೀಡಲಾಗುತ್ತಿದೆ. ಇನ್ನು ದೊಡ್ಡ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಹೊಂದಿಸಲು ದಾನಿಗಳು ಮತ್ತು ಸಂಘ ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತಿದೆ.

Leave a Reply

Your email address will not be published. Required fields are marked *