ಒಂದೇ ಹುದ್ದೆಗೆ ಇಬ್ಬರ ಪೈಪೋಟಿ…!

ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಂಡ್ಯ ಪ್ರಾದೇಶಿಕ ಕಚೇರಿಯಲ್ಲಿ ನಿರ್ದೇಶಕರ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆಯುತ್ತಿದೆ.

ವಿವಿಯ ಅಸ್ಪಷ್ಟತೆಯ ವರ್ಗಾವಣೆ ಆದೇಶದಿಂದಾಗಿ ಇಬ್ಬರ ನಡುವೆ ಗೊಂದಲ ಸೃಸ್ಟಿಯಾಗಿದ್ದು, ಇದರಿಂದಾಗಿ ಕಚೇರಿಯ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಇನ್ನು ಇತ್ತ ಇಬ್ಬರ ಪೈಕಿ ಡಾ.ಸುಧಾಕರ ಹೊಸಹಳ್ಳಿ ಅವರು ನ್ಯಾಯ ಬೇಕೆಂದು ಬುಧವಾರದಿಂದ ಕಚೇರಿ ಆವರಣದಲ್ಲಿಯೇ ಧರಣಿ ಆರಂಭಿಸಿದ್ದಾರೆ.

ಏನಿದು ಗೊಂದಲ: ದಾವಣಗೆರೆ ಪ್ರಾದೇಶಿಕ ನಿರ್ದೇಶಕರಾಗಿದ್ದ ಡಾ.ಸುಧಾಕರ ಹೊಸಹಳ್ಳಿ, ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಡಾ.ನಂದಕುಮಾರಿ ಸೇರಿದಂತೆ 8 ಜನರನ್ನು ಮೇ 27ರಂದು ವರ್ಗಾವಣೆಗೊಳಿಸಿ ಮುಕ್ತ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದರು. ಅದರಂತೆ ಡಾ.ಸುಧಾಕರ ಹೊಸಹಳ್ಳಿ ಅವರು ದಾವಣಗೆರೆ ಪ್ರಾದೇಶಿಕ ನಿರ್ದೇಶಕ ಹುದ್ದೆಯಿಂದ ಬಿಡುಗಡೆಗೊಂಡು ಮೇ 30ರಂದು ಮಂಡ್ಯ ಪ್ರಾದೇಶಿಕ ನಿರ್ದೇಶಕರ ಕಚೇರಿಗೆ ಬಂದಿದ್ದಾರೆ. ಆದರೆ, ಡಾ.ನಂದಕುಮಾರಿ ಅವರ ಗೈರುಹಾಜರಿಯಲ್ಲಿಯೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.

ಈ ನಡುವೆ ಜೂ.4ರಂದು ವರ್ಗಾವಣೆ ಆದೇಶ ತಡೆಹಿಡಿದು ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ ವಿವಿ ಕುಲಸಚಿವರು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ. ಆದೇಶಕ್ಕೆ ತಡೆಯಾಗಿರುವ ಕಾರಣ ಡಾ.ನಂದಕುಮಾರಿ ಮಂಡ್ಯದಲ್ಲಿಯೇ ಕೆಲಸ ಮುಂದುವರಿಸಿದ್ದಾರೆ. ಇತ್ತ ಡಾ.ಸುಧಾಕರ ಹೊಸಹಳ್ಳಿ ಅವರು ‘ಯಥಾಸ್ಥಿತಿ ಕಾಪಾಡುವಂತೆ ವಿವಿ ಹೇಳಿದೆ. ಆದರೆ, ದಾವಣಗೆರೆಗೆ ವಾಪಸ್ ಹೋಗುವಂತೆ ತಿಳಿಸಿಲ್ಲ’ ಎನ್ನುತ್ತಿದ್ದಾರೆ. ಇದಲ್ಲದೆ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವ ವಿಚಾರಕ್ಕೂ ಇಬ್ಬರ ನಡುವೆ ಗೊಂದಲ ನಡೆದಿದೆ.

ಇತ್ತ ಡಾ.ಸುಧಾಕರ ಅವರು ತಮ್ಮನ್ನು ನಿಂದಿಸಿದ್ದಲ್ಲದೆ, ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಡಾ.ನಂದಕುಮಾರಿ ಜೂ.17ರಂದು ಕುಲಸಚಿವರಿಗೆ ದೂರು ನೀಡಿದ್ದಾರೆ. ಆದರೆ, ನಾನು ಅನುಚಿತವಾಗಿ ವರ್ತಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅನುಚಿತವಾಗಿ ನಡೆದುಕೊಂಡಿದ್ದಲ್ಲಿ ದಾಖಲೆ ಹಾಜರುಪಡಿಸಿ ನನ್ನನ್ನು ಜೈಲಿಗೆ ಹಾಕಲಿ. ನನ್ನನ್ನು ತೇಜೋವಧೆ ಮಾಡಲು ಹುನ್ನಾರ ನಡೆಸಲಾಗುತ್ತಿದೆ ಎಂದು ಡಾ.ಸುಧಾಕರ ಪ್ರತ್ಯಾರೋಪ ಮಾಡಿದ್ದಾರೆ.

ಹದಗೆಟ್ಟ ವಾತಾವರಣ: ಗೊಂದಲದಿಂದಲೇ ಮುಳುಗಿರುವ ಮುಕ್ತ ವಿವಿಯಲ್ಲಿ ಮತ್ತೊಂದು ತಲೆನೋವು ಪ್ರಾರಂಭವಾಗಿದೆ. ಇತ್ತ ಪ್ರಸಕ್ತ ಸಾಲಿಗೆ ಪ್ರವೇಶಾತಿ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಇಬ್ಬರು ನಿರ್ದೇಶಕರ ನಡುವಿನ ಗೊಂದಲ ಪರಿಹರಿಸುವಲ್ಲಿ ವಿಶ್ವವಿದ್ಯಾಲಯ ವಿಲವಾಗಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸದಿದ್ದರೆ ವಿವಿಯ ಸ್ಥಿತಿ ಮತ್ತಷ್ಟು ಹದಗೆಡಲಿದೆ.

ಕುಲಸಚಿವರು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಆದ್ದರಿಂದ, ನಾನು ಮಂಡ್ಯದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದೇನೆ. ಡಾ.ಸುಧಾಕರ ಅವರು ಧರಣಿ ನಡೆಸುತ್ತಿರುವ ಬಗ್ಗೆಯೂ ವಿವಿಯ ಕುಲಸಚಿವರ ಗಮನಕ್ಕೆ ಮಾಹಿತಿ ನೀಡಲಾಗಿದೆ.
ಡಾ.ನಂದಕುಮಾರಿ, ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ

Leave a Reply

Your email address will not be published. Required fields are marked *