ಕನ್ನಂಬಾಡಿ ಸುತ್ತಮುತ್ತ ಡಿಸ್ನಿ ಲ್ಯಾಂಡ್ ಫೀವರ್

| ಶ್ರೀಕಾಂತ್ ಶೇಷಾದ್ರಿ ಕೆಆರ್​ಎಸ್

ವಿಶ್ವವಿಖ್ಯಾತ ಬೃಂದಾವನವನ್ನು ಡಿಸ್ನಿ ಮಾದರಿ ಬದಲಿಸಲು ಸರ್ಕಾರವೇನೋ ಅತ್ಯುತ್ಸಾಹದಲ್ಲಿದೆ. ಆದರೆ, ಕನ್ನಂಬಾಡಿ ಸುತ್ತಮುತ್ತಲ ಸಾವಿರಾರು ಕುಟುಂಬಗಳಲ್ಲಿ ಆತಂಕದ ಕಾರ್ವೇಡ ಆವರಿಸಿದೆ.

ಡಿಸ್ನಿ ಮಾದರಿ ಬಗ್ಗೆ ನಿಮಗೇನು ಗೊತ್ತು ಎಂಬ ಪ್ರಶ್ನೆಯೊಂದಿಗೆ ಕನ್ನಂಬಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿಜಯವಾಣಿ ಹೆಜ್ಜೆ ಹಾಕಿದಾಗ, ಅಲ್ಲಿನ ಜನರೊಳಗಿನ ದುಗುಡ ಎಷ್ಟೆಂಬುದು ಬಹಿರಂಗವಾಯಿತು. ಕೆಆರ್​ಎಸ್ ವೀಕ್ಷಿಸಲು ಪ್ರತಿನಿತ್ಯ ಆಗಮಿಸುವ ಪ್ರವಾಸಿಗರಿಗೆ ತಿಂಡಿ-ತಿನಿಸು ವ್ಯಾಪಾರ ಮಾಡುವ ತಳ್ಳುಗಾಡಿ, ಬೀದಿಬದಿ ವ್ಯಾಪಾರಿಗಳ ನೂರಕ್ಕೂ ಅಧಿಕ ಕುಟುಂಬಕ್ಕೆ ಬಹುದೊಡ್ಡ ಆತಂಕವಿದೆ.

ಈ ಬಗ್ಗೆ ಹೆಸರು ಹೇಳಿಕೊಳ್ಳಲು ಭಯಪಡುತ್ತಲೇ ಮಾತನಾಡಿದ ವ್ಯಾಪಾರಿಯೊಬ್ಬರು, ಯೋಜನೆ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇರಬಹುದು, ನಮಗೆ ಇಲ್ಲ. ಖಾಸಗಿ ಹೂಡಿಕೆದಾರರಿಗೆ ಲಾಭ ಮಾಡಿಕೊಡಲಾಗುತ್ತದೆ, ಇದರಿಂದ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಎನಿಸುತ್ತಿದೆ ಎಂದು ಆತಂಕ ಹೊರಹಾಕಿದರು. ಪ್ರತಿಮೆ ನಿರ್ವಣವಾಗುವ ಸರ್ವೆ ನಂಬರ್ 291ರಲ್ಲಿ ಅನೇಕ ಕುಟುಂಬಗಳು ಆತಂಕದಲ್ಲಿವೆ. ಇವರಲ್ಲಿ ಬಹುತೇಕರು 110 ವರ್ಷದ ಹಿಂದೆ ಡ್ಯಾಂ ನಿರ್ವಿುಸಲು ಬೇರೆಡೆಯಿಂದ ಇಲ್ಲಿಗೆ ಬಂದು ನೆಲೆಸಿ, ಅಲ್ಲೇ ಬದುಕು ಕಟ್ಟಿಕೊಂಡವರು. ನೀರಾವರಿ ನಿಗಮದ ಬಳಿ ಒಂದಡಿ ಜಾಗವೂ ಇಲ್ಲಿಲ್ಲ. ಸರ್ಕಾರ ಹೇಳುವಂತೆ ಅಗತ್ಯ ಸರ್ಕಾರಿ ಭೂಮಿ ಇಲ್ಲ. ಅವರೇ ನಿರ್ಧರಿಸಿಕೊಂಡಿರುವ ಜಾಗದಲ್ಲಿ ಒಡೆಯರ್ ಆಡಳಿತದಲ್ಲಿ ಕಟ್ಟಿದ ಶತಮಾನ ಇತಿಹಾಸದ ಸರ್ಕಾರಿ ಶಾಲೆ, ದೇವಸ್ಥಾನ ಇದೆ, ಅದನ್ನು ಶಿಫ್ಟ್ ಮಾಡುವ ಯೋಜನೆ ಹೊಂದಿದ್ದಾರೆ. ಸರ್ಕಾರಿ ಕಾಲೇಜು, ಆಸ್ಪತ್ರೆ ಕೂಡ ಸ್ಥಳಾಂತರಿಸಬೇಕು ಎಂದು ನಿವಾಸಿಗಳು ದೂರುತ್ತಾರೆ.

ಅಂಕಿ ಸಂಖ್ಯೆ

# 290 ಎಕರೆ ಜಾಗದಲ್ಲಿ ಅನುಷ್ಠಾನ

# ಬೃಂದಾವನ ಹೊರತುಪಡಿಸಿ 200 ಎಕರೆ ಜಾಗ ಬಳಕೆ

# 1,400-1,500 ಕೋಟಿ ರೂ. ಯೋಜನೆ ?ಎರಡೂವರೆ ವರ್ಷದಲ್ಲಿ ನಿರ್ಮಾಣ

ಈ ತಿಂಗಳೇ ಟೆಂಡರ್, ಸಮಿತಿ ರಚನೆ

ಬೃಂದಾವನವನ್ನು ಡಿಸ್ನಿಲ್ಯಾಂಡ್ ಮಾದರಿ ದೇಶವೇ ತಿರುಗಿ ನೋಡುವಂಥ ಪ್ರವಾಸಿ ತಾಣ ಮಾಡುತ್ತೇವೆ, ಸರ್ಕಾರದ ಹಣ ಖರ್ಚಿಲ್ಲದೇ ಪಿಪಿಪಿ ಮಾದರಿ ಯೋಜನೆ ಜಾರಿಗೊಳಿಸಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುತ್ತಿದ್ದೇವೆ. ಈ ತಿಂಗಳಲ್ಲೇ ಟೆಂಡರ್ ಕರೆದು ಡ್ಯಾಂನ ಸಂಸ್ಕೃತಿ, ಇತಿಹಾಸಕ್ಕೆ ಧಕ್ಕೆ ಬಾರದಂತೆ ಅನುಷ್ಠಾನ ಮಾಡಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಯೋಜನೆ ಕುರಿತಾಗಿ ರಾಜ್ಯಮಟ್ಟದ ಸಮಿತಿ ರಚಿಸುತ್ತೇವೆ. ನಾಲ್ವರು ಸಚಿವರು, ಮೈಸೂರು ಮಹಾರಾಜರು, ಇಂಜಿನಿಯರ್ ಅಸೋಸಿಯೇಷನ್, ಮೈಸೂರು ವಿವಿ, ಪ್ರವಾಸೋದ್ಯಮ, ಲೋಕೋಪಯೋಗಿ, ರೈಲ್ವೆ, ವಿಮಾನಯಾನ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಉದ್ಯಮಿ ಖೋಡೆ ಕುಟುಂಬದರು ಸಮಿತಿಯಲ್ಲಿರಲಿದ್ದಾರೆ ಎಂದು ವಿವರಿಸಿದರು.

ಪ್ರತಿಮೆಯಲ್ಲ ವೀಕ್ಷಣಾ ಗೋಪುರ!: ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಯನ್ನು ಕಾವೇರಿ ಮಾತೆ ರೂಪದಲ್ಲಿ ನಿರ್ವಿುಸಲು ಹೊರಟಿದ್ದ ಸರ್ಕಾರ ನಿಲುವು ಬದಲಾಯಿಸಿದೆ. ನಾವು ಪ್ರತಿಮೆ ನಿರ್ವಿುಸಲ್ಲ, ವೀಕ್ಷಣಾ ಗೋಪುರ ನಿರ್ವಿುಸುತ್ತೇವೆ. ಇದು ಕಾವೇರಿ, ಕೃಷ್ಣರಾಜ ಒಡೆಯರ್ ಅವರದ್ದೂ ಆಗಬಹುದು ಎಂದು ಡಿಕೆಶಿ ತಿಳಿಸಿದರು.