ಕೆಆರ್‌ಎಸ್‌ಗೆ ಮಾಜಿ ಕ್ರಿಕೆಟಿಗ ವಿಶ್ವನಾಥ್ ಭೇಟಿ

ಕೃಷ್ಣರಾಜಸಾಗರ: ಕೆ.ಆರ್.ಸಾಗರ ಅಣೆಕಟ್ಟೆಗೆ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಗುರುವಾರ ಭೇಟಿ ನೀಡಿ, ವೀಕ್ಷಿಸಿದರು.

1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಜಿ.ಆರ್.ವಿಶ್ವನಾಥ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷ ಸಂಜಯ್ ದೇಸಾಯಿ, ಕಾರ್ಯದರ್ಶಿ ಸುಧಾಕರ್ ರಾವ್, ಕೆಸಿಎ ಸದಸ್ಯ ರಘುನಾಥ್ ಅವರೊಂದಿಗೆ ಅಣೆಕಟ್ಟೆ ವೀಕ್ಷಿಸಿದರು. ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಗುರುದತ್ ಅವರಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಅಣೆಕಟ್ಟೆ ತುಂಬಾ ಸುಂದರವಾಗಿದೆ. ಇದೇ ರೀತಿ ಮುಂದೆಯೂ ಅಣೆಕಟ್ಟೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಕಾವೇರಿ ನದಿ ನೀರು ಅಣೆಕಟ್ಟೆಯಲ್ಲಿ ಯಾವಾಗಲೂ ಇದೇ ರೀತಿ ತುಂಬಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದರಿಂದ ಈ ಭಾಗದ ರೈತರ ಜೀವನವೂ ಸಮೃದ್ಧವಾಗಿರಲಿ ಎಂದು ತಿಳಿಸಿದರು.

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಪಿಎಸೈ ಪ್ರಮೋದ್, ಸೋಹೆಲ್ ಅಹಮದ್, ಕುಮಾರ್, ಗ್ರಾಪಂ ಸದಸ್ಯ ವಿಜಯಕುಮಾರ್ ಇದ್ದರು.