ಮುದ್ದೆ ಉಪ್ಸಾರಷ್ಟೇ ಪೌಷ್ಟಿಕಾಂಶ ನೀಡಲ್ಲ

ಕೆ.ಎಂ.ದೊಡ್ಡಿ: ಗ್ರಾಮೀಣ ಸೊಗಡಿನ ವಿಶಿಷ್ಟ ಆಹಾರ ಮುದ್ದೆ ಉಪ್ಸಾರು ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಗಳನ್ನು ನೀಡುವುದಿಲ್ಲ. ಎಲ್ಲ ರೀತಿಯ ಆಹಾರವನ್ನು ಸೇವಿಸಬೇಕೆಂದು ನರರೋಗ ತಜ್ಞ ಡಾ.ಅನಿಲ್ ಆನಂದ್ ಸಲಹೆ ನೀಡಿದರು.

ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ಮಂಡ್ಯ ಯೂತ್ ಗ್ರೂಪ್ ಹಾಗೂ ಮಾದರಹಳ್ಳಿ ಗ್ರಾಮಸ್ಥರ ವತಿಯಿಂದ ಶನಿವಾರ ರಾತ್ರಿ ಪಡಸಾಲೆ ಕಾರ್ಯಕ್ರಮದಡಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇವಲ ಮುದ್ದೆ-ಉಪ್ಸಾರನ್ನು ಸದಾಕಾಲ ಸೇವಿಸುವುದರಿಂದ ಅಪೌಷ್ಟಿಕತೆ ಕಾಡಬಹುದು. ಹೀಗಾಗಿ ಗ್ರಾಮೀಣ ಜನರು ಎಲ್ಲ ರೀತಿಯ ಆಹಾರಗಳನ್ನು ಸೇವಿಸುವತ್ತ ಗಮನಹರಿಸಬೇಕು. ಕಾಲಕಾಲಕ್ಕೆ ಸಿಗುವ ಎಲ್ಲ ರೀತಿಯ ಹಣ್ಣು, ತರಕಾರಿ, ಕಾಳುಗಳು, ಮೊಟ್ಟೆ, ಹಾಲು, ಮಾಂಸವನ್ನೂ ಬಳಕೆ ಮಾಡಿದರೆ ಉತ್ತಮ. ನೀವು ಬೆಳೆಯುವ ಆಹಾರಗಳನ್ನು ನಗರದ ಜನರಿಗೆ ಮಾರಾಟ ಮಾಡಿ ತಾವು ಮಾತ್ರ ಮುದ್ದೆ, ಉಪ್ಪೆಸರಿನ ಮೇಲೆ ಅವಲಂಬಿತವಾಗಿ ಅಪೌಷ್ಟಿಕತೆಯಿಂದ ಬಳಲುವುದು ಸರಿಯಲ್ಲ ಎಂದರು.

ರಾಗಿ ಮುದ್ದೆ ಕ್ಯಾಲ್ಸಿಯಂ ಅಂಶವನ್ನು ಮಾತ್ರ ವೃದ್ಧಿಗೊಳಿಸಬಲ್ಲದು. ಉಳಿದಂತೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಮತ್ತು ಮಿನರಲ್ಸ್‌ಗಳನ್ನು ಪೂರೈಸುವುದಿಲ್ಲ. ಕೃಷಿ ಕೆಲಸದಂತಹ ಕಷ್ಟದ ಕೆಲಸ ಮಾಡುವ ಗ್ರಾಮೀಣರು ದೇಹಕ್ಕೆ ಉತ್ತಮವಾದ ಆಹಾರವನ್ನು ಸೇವಿಸಿದಾಗ ಮಾತ್ರ ಸದೃಢವಾಗಿರಲು ಸಾಧ್ಯ ಎಂದರು.

ಡಾ.ಯಾಶಿಕಾ ಅನಿಲ್ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಸಕಾಲದಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಶಿಬಿರದಲ್ಲಿ 350ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿ, 150 ಜನರಿಗೆ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. 96 ಜನರಿಗೆ ರಕ್ತಹೀನತೆ ತಪಾಸಣೆ, 60 ಜನರಿಗೆ ಇಸಿಜಿ, 26 ಜನರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಯಿತು.

ಸಂಜೆ 6.30ಕ್ಕೆ ಆರಂಭವಾದ ಆರೋಗ್ಯ ತಪಾಸಣಾ ಶಿಬಿರ 11.30ರ ತನಕ ನಡೆಯಿತು, ಮಾದರಹಳ್ಳಿ, ಶಿಂಗಟಗೆರೆ, ಕೆ.ಶೆಟ್ಟಹಳ್ಳಿ, ಲಕ್ಷ್ಮೇಗೌಡನದೊಡ್ಡಿ ಮೊದಲಾದ ಗ್ರಾಮಗಳ ಜನತೆ ಆಗಮಿಸಿ ಚಿಕಿತ್ಸೆ, ಸಲಹೆ ಹಾಗೂ ಔಷಧಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಹೊಂಬಾಳೆ ಸಿದ್ದೇಗೌಡ (ಧಾರ್ಮಿಕ ಕ್ಷೇತ್ರ), ಚಿಕ್ಕಾಳಣ್ಣ (ಸಾಮಾಜಿಕ), ದೇವಮ್ಮ (ಸೋಬಾನೆಪದ), ಎಂ.ಪಿ.ಪೂಜಾ (ಕ್ರೀಡೆ), ಸಂಗೀತಾ (ಶಿಕ್ಷಣ) ಅವರನ್ನು ಸನ್ಮಾನಿಸಲಾಯಿತು.

ಮಂಡ್ಯ ಯೂತ್‌ಗ್ರೂಪ್ ಪದಾಧಿಕಾರಿಗಳ ಜತೆಗೆ ಗ್ರಾಮದ ಯುವಕರಾದ ಎಂ.ಇ.ಕೃಷ್ಣ, ದರ್ಶನ್, ರಾಜಣ್ಣ, ಮಲ್ಲೇಶ್, ಸಂತೋಷ್, ವಿನಯ್, ಮಂಜು, ಮಹೇಶ್, ನವೀನ್ ಸೇರಿದಂತೆ ಹಲವರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

 

Leave a Reply

Your email address will not be published. Required fields are marked *