ಬನ್ನಿ ಎಂದೇಳಿದ್ದ ತಹಸೀಲ್ದಾರ್ ನಾಪತ್ತೆ!

ಮಂಡ್ಯ: ರಾಜೀವ್ ಗಾಂಧಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವುದಾಗಿ ಹೇಳಿ ಕರೆದಿದ್ದ ತಹಸೀಲ್ದಾರ್ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹನಕೆರೆ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಲೋಕಸಭಾ ಚುನಾವಣೆಗೂ ಮೊದಲೇ ಗ್ರಾಮದ 25 ಜನರಿಗೆ ಹಕ್ಕುಪತ್ರ ನೀಡುವಂತೆ ಸರ್ಕಾರ ಆದೇಶಿಸಿತ್ತು. ಚುನಾವಣೆ ನೆಪ ಹೇಳಿ ಕಾಲ ತಳ್ಳಿದರು. ಆ ನಂತರ ಜಿಲ್ಲಾಧಿಕಾರಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದರು.

ತಹಸೀಲ್ದಾರ್ ಮಂಗಳವಾರ ಅಥವಾ ಬುಧವಾರ ಬನ್ನಿ ಎಂದು ಹೇಳಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇವೆ. ಆದರೆ, ಅವರೇ ಕಾಣಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಾವೆಲ್ಲ ಬಡವರು, ಕೂಲಿ ಮಾಡಿಕೊಂಡ ಜೀವನ ಮಾಡುವವರು. ಅವರು ಹೇಳಿದ್ದರಿಂದಲೇ ಬಂದು ಕಾದಿದ್ದೇವೆ. ಈಗ ಅವರೇ ಇಲ್ಲ ಅಂದರೆ ನಾವೇನು ಮಾಡಬೇಕು. ನಮಗೆ ಇಂದಿನ ಕೂಲಿಯೂ ಇಲ್ಲ. ಇತ್ತ ಹಕ್ಕುಪತ್ರವೂ ಇಲ್ಲ. ಬಡವರ ಜೀವನದ ಜತೆ ತಹಸೀಲ್ದಾರ್ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ನಮಗೆ ಹಕ್ಕುಪತ್ರ ನೀಡದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ವಸಂತ್ ಅವರಿಗೆ ಮನವಿ ಸಲ್ಲಿಸಿದರು.
ಶಿವಳ್ಳಿ ಗ್ರಾಪಂ ಅಧ್ಯಕ್ಷ ದೇವರಾಜು, ಚಿಕ್ಕಮಂಡ್ಯ ಆನಂದ್, ಹನಕೆರೆ ಗ್ರಾಮದ ಮುಖಂಡ ಗಂಗರಾಜು, ಕಾವ್ಯ, ಗಾಯತ್ರಿ, ಲಕ್ಷ್ಮಮ್ಮ ಮೊದಲಾದವರಿದ್ದರು.

Leave a Reply

Your email address will not be published. Required fields are marked *