ಮಕ್ಕಳಿಗೆ ವಚನ ಸಾಹಿತ್ಯ ಕಲಿಸಿ

ಮಂಡ್ಯ: ವಚನ ಸಾಹಿತ್ಯ ಮಕ್ಕಳಿಗೆ ಸಂಸ್ಕಾರ, ಜೀವನ ಮೌಲ್ಯ ಹಾಗೂ ನಾಗರಿಕ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸುತ್ತದೆ ಎಂದು ಬೆಂಗಳೂರು ಬಸವಧರ್ಮ ಪೀಠದ ಶ್ರೀದೇವಿ ಕೊಡೆಕಲ್ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ’ ಉದ್ಘಾಟಿಸಿ ಮಾತನಾಡಿದರು.

ಪಾಲಕರು ಮಕ್ಕಳಿಗೆ ವಚನ ಸಾಹಿತ್ಯ ಕಲಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕು. ಅಂತೆಯೇ, ತಾಯಂದಿರು ಮೊಬೈಲ್, ಟಿವಿ ಸಂಸ್ಕೃತಿಯಿಂದ ದೂರ ಉಳಿದು ಮಕ್ಕಳಿಗೆ ಸಂಸ್ಕಾರದ ಪಾಠ ಕಲಿಸುವತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಮಕ್ಕಳಿಗೆ ಸಂಸ್ಕಾರ ಹೇಳಿಕೊಡದಿರುವುದರಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಶಿಕ್ಷಕರ ಕೈಯಲ್ಲಿದ್ದ ಬೆತ್ತ ಹೋದ ಮೇಲೆ ಅದು ಪೊಲೀಸರ ಕೈಗೆ ಬಂದಿದೆ. ಚಿಕ್ಕವಯಸ್ಸಿನಲ್ಲೇ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸದಿದ್ದರೆ ಅಡ್ಡದಾರಿ ಹಿಡಿದು ಪೊಲೀಸರಿಂದ ಶಿಕ್ಷೆಗೊಳಗಾಗುವ ಪರಿಸ್ಥಿತಿ ಸೃಸ್ಟಿಯಾಗುತ್ತಿದೆ. ಅದಕ್ಕಾಗಿ ಮಕ್ಕಳಲ್ಲಿ ಸದ್ಗುಣ ಬೆಳೆಸುವ ಅವಶ್ಯಕತೆ ಇದ್ದು, ಅದಕ್ಕಾಗಿ ವಚನಗಳನ್ನು ಅರ್ಥೈಸುವುದು ಅಗತ್ಯವಾಗಿದೆ ಎಂದರು.

ಸಾಮಾನ್ಯ ಜನರೂ ವಚನ ಕಲಿಯುವ ಅಗತ್ಯವಿದೆ. ದಿನವೂ ಎರಡೆರಡು ವಚನ ಕಲಿತು ಅರ್ಥ ಮಾಡಿಕೊಂಡರೆ ಸಮಾಜ ತಿದ್ದಲು ಬಸವಣ್ಣ, ಹಡಪದ ಅಪ್ಪಣ್ಣನವರು ಮಾಡಿದ ಪ್ರಯತ್ನದ ಅರಿವಾಗುತ್ತದೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ಆಧ್ಯಾತ್ಮಿಕ ಚಳವಳಿಯಲ್ಲಿ ಭಾಗವಹಿಸಿದ್ದ ಶರಣ- ಶರಣೆಯರಲ್ಲಿ ಹಡಪದ ಅಪ್ಪಣ್ಣ ಅಗ್ರಗಣ್ಯರಾಗಿದ್ದರು. ಬಸವಣ್ಣನವರ ಒಡನಾಡಿಯಾಗಿ, ಆಪ್ತ ಸಲಹೆಗಾರರಾಗಿದ್ದರು. ಅಂದಿನ ವ್ಯವಸ್ಥೆಯೊಳಗೆ ಸವಿತಾ ಸಮಾಜದವರ ಬಗ್ಗೆ ಜನರಲ್ಲಿದ್ದ ಮೌಢ್ಯವನ್ನು ತೊಡೆದು ಹಾಕುವ ಉದ್ದೇಶದಿಂದ ಹಡಪದ ಅಪ್ಪಣ್ಣನವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಬಸವಣ್ಣ ನೀಡಿದ್ದರು. ಬಸವಣ್ಣ ಮತ್ತು ಅಪ್ಪಣ್ಣ ಒಂದೇ ನಾಣ್ಯದ ಎರಡು ಮುಖಗಳಂತಿದ್ದರು. ಅಪ್ಪಣ್ಣ ಸಾವಿರಕ್ಕೂ ಹೆಚ್ಚು ವಚನ ರಚನೆ ಮಾಡಿದ್ದರು. ಅದರಲ್ಲಿ 246 ವಚನ ರಾಜ್ಯಸರ್ಕಾರ ಬಿಡುಗಡೆ ಮಾಡಿರುವ ವಚನ ಸಾಹಿತ್ಯ ಸಂಪುಟದಲ್ಲಿ ಪ್ರಕಟಿಸಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್.ನಾಗರತ್ನಸ್ವಾಮಿ ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಶಿವಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ನಗರಸಭೆ ಸದಸ್ಯ ಶ್ರೀಧರ್, ಎಲ್.ಸಂದೇಶ್, ಎಂ.ಬಿ.ಶ್ರೀನಿವಾಸ್, ಸಿದ್ದಶೆಟ್ಟಿ, ಆಂಜನಪ್ಪ ಇತರರಿದ್ದರು.

ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಶಿವಶರಣ ಹಡಪದ ಅಪ್ಪಣ್ಣನವರ ಅಲಂಕೃತ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮುಕ್ತಾಯವಾಯಿತು.

Leave a Reply

Your email address will not be published. Required fields are marked *