ಸ್ವಾಮೀಜಿಗಳಿಂದ ಭಾವನಾತ್ಮಕ ಮಾತು ಸರಿಯಲ್ಲ

ಮಂಡ್ಯ: ಕೇವಲ ಮಂತ್ರಿ ಮಾಡಿಲ್ಲ, ಏನೋ ಮಾಡಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ ಎಂದು ಸ್ವಾತಂತ್ರೃ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಪ್ರತಿಪಾದಿಸಿದರು.

ನಗರದ ಗಾಂಧಿ ಭವನದಲ್ಲಿ ಕನ್ನಡ ಸೇನೆ ಆಯೋಜಿಸಿದ್ದ ಅಖಂಡ ಕರ್ನಾಟಕ ಕುರಿತು ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರೃ ನಂತರ 562 ರಾಜರನ್ನು ಒಟ್ಟುಗೂಡಿಸಲು ಸರ್ದಾರ್ ವಲಭಭಾಯ್ ಪಟೇಲರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅಂತೆಯೇ, ಕರ್ನಾಟಕ ಏಕೀಕರಣಕ್ಕೂ ನಿರಂತರ ಹೋರಾಟಗಳು ನಡೆದಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸ್ವಾಮೀಜಿಗಳು ಜಗದ್ಗುರುಗಳು. ಆದರೆ, ಆಯಾಯ ಜಾತಿಗಳಿಗೆ ಸೀಮಿತರಾಗಿದ್ದಾರೆ. ಇದು ಎಂತಹ ವಿಪರ್ಯಾಸ. ಎಲ್ಲ ಧರ್ಮ, ಸಮಾಜವನ್ನು ಸಮನಾಗಿ ಕಂಡು, ಮೂಲ ಸಮಸ್ಯೆಗಳ ನಿವಾರಣೆ ಕುರಿತು ಮಠಾಧಿಪತಿಗಳು ಮಾತನಾಡಬೇಕು. ಭಾವನಾತ್ಮಕವಾಗಿ ಮಾತುಗಳು ಸರಿಯಲ್ಲ ಎಂದರು.

ರಾಜ್ಯದಲ್ಲಿ ನೂರಾರು ಸಂಘಟನೆಗಳಿವೆ. ಎಲ್ಲವೂ ಒಂದೊಂದು ಕಾರಣಕ್ಕೆ ಹೋರಾಟ ಮಾಡುತ್ತಿವೆ. ದೇಶಕ್ಕೆ ಸ್ವಾತಂತ್ರೃ ಬಂದು 71 ವರ್ಷಗಳಾಗಿವೆ. ಆದರೆ, ಇನ್ನೂ ದೇಶದಲ್ಲಿ ಅರೆಹೊಟ್ಟೆಯಲ್ಲಿ ಸಾವಿರಾರು ಜನರಿದ್ದಾರೆ. ಮೂಲಭೂತ ಸಮಸ್ಯೆ, ಬಡತನ ನಿವಾರಣೆಗೆ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಡಬೇಕು. ಕೆಲಸಂಘಟನೆಗಳು ಕೆಲ ವಿಷಯಗಳನ್ನು ಗುತ್ತಿಗೆ ಪಡೆದಂತೆ ನಡೆದುಕೊಳ್ಳಬಾರದು ಎಂದರು.

ಸಣ್ಣ ಕೈಗಾರಿಕೆಗಳು ಬೇಕು: ಪ್ರತಿ ಎರಡು-ಮೂರು ಹಳ್ಳಿಗಳಲ್ಲೊಂದು ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಆಹಾರ ಸಂಸ್ಕರಣೆಗೆ ಆದ್ಯತೆ ನೀಡಬೇಕು ಎಂದು ದೊರೆಸ್ವಾಮಿ ಹೇಳಿದರು.

ಮೂಲ ರೈತ ಸಂಘದ ತಾಲೂಕು ಅಧ್ಯಕ್ಷ ಹೆಮ್ಮಿಗೆ ಚಂದ್ರು ಅವರು ಹೆಚ್ಚು ಸಾಲ ಮನ್ನಾ ಉತ್ತರ ಕರ್ನಾಟಕಕ್ಕೆ ಆಗಿದೆ. ಆದರೂ ತಾರತಮ್ಯ ಎನ್ನುತ್ತಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿನವರು ಹೆಚ್ಚು ಸಾಲ ಪಡೆದಿದ್ದರು. ನೀವು ಕಡಿಮೆ ಸಾಲ ಪಡೆದಿದ್ದೀರಿ. ಆದ್ದರಿಂದ ಅದು ಆಗಿದೆ.

ರೈತರ ಉತ್ಪನ್ನಗಳಿಗೆ ನ್ಯಾಯವಾದ ಮಾರುಕಟ್ಟೆ ವ್ಯವಸ್ಥೆ ಸಿಗಬೇಕು. ಪ್ರಸ್ತುತ ದರ ನಿಗದಿ ಮಾಡುತ್ತಿರುವವರು ದಲ್ಲಾಳಿಗಳು. ಸಂತೆಗಳನ್ನು ಮಾಡಿ, ರೈತರೇ ನೇರವಾಗಿ ಮಾರಾಟ ಮಾಡಿದರೆ ಸೂಕ್ತ. ದಲ್ಲಾಳಿಗಳು ಇರುವ ತನಕ ಸಾಲ ಮನ್ನಾ ಮಾಡಲೇಬೇಕಾದ ಪ್ರಮೇಯ ಇರುತ್ತದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕುರಿತು ರೈತ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.

ಹಳೆ ಮೈಸೂರಿನ ಕೆಲವು ತಾಲೂಕುಗಳು ಅಭಿವೃದ್ಧಿಯಾಗಿಲ್ಲ. ಹಾಗೆಯೇ ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿಗೆ ಒತ್ತು ನೀಡಲು ಒತ್ತಾಯಿಸಬೇಕೆ ಹೊರತು ಪ್ರತ್ಯೇಕದ ಮಾತು ಸಲ್ಲ ಎಂದು ರಾಜಕೀಯದ ಹಿತಾಸಕ್ತಿ ಅಡಗಿದೆಯೆ ಎಂಬ ಜೈ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎಸ್.ನಾರಾಯಣ್ ಪ್ರಶ್ನೆಗೆ ಉತ್ತರಿಸಿದರು.

ಮಾಜಿ ಸಂಸದ ಡಾ.ಜಿ.ಮಾದೇಗೌಡ, ಪ್ರೊ.ಕರೀಮುದ್ದೀನ್, ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ವಿವಿಧ ಸಂಘಟನೆಗಳ ಸುಧೀರ್, ತಗ್ಗಹಳ್ಳಿ ಯಶೋದಾ, ಎಂ.ಬಿ.ಶ್ರೀನಿವಾಸ್, ನಿರ್ದೇಶಕ ವಿನಯ್, ಮಹಾಂತಪ್ಪ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.