ಅನುದಾನ ಹಂಚಿಕೆ ತಾರತಮ್ಯ…!

ಮಂಡ್ಯ: ಕುಡಿಯುವ ನೀರಿಗೆ ಸಂಬಂಧಿಸಿದ ಅನುದಾನ ಕೊಡಲು ತಾರತಮ್ಯ ಮಾಡುತ್ತಿರುವ ಅಧಿಕಾರಿ ವಿರುದ್ಧ ಜಿಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ನಗರದ ಜಿಪಂನ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆ ಪ್ರಾರಂಭದಲ್ಲಿಯೇ ಅನುದಾನ ಹಂಚಿಕೆ ಕುರಿತು ಚರ್ಚೆ ಪ್ರಾರಂಭವಾಯಿತು. ಚೀಣ್ಯ ಕ್ಷೇತ್ರದ ಜೆಡಿಎಸ್ ಸದಸ್ಯೆ ಸುಶೀಲಮ್ಮ, ಕುಡಿಯುವ ನೀರಿಗೆ ನೀಡಿದ್ದ 47 ಲಕ್ಷ ರೂ. ಅನುದಾನವನ್ನು ನನ್ನ ಗಮನಕ್ಕೆ ತರದೆ ಶಾಸಕರೊಂದಿಗೆ ಚರ್ಚಿಸಿ ಖಾಸಗಿಯವರಿಗೆ ಹಂಚಿಕೆ ಮಾಡಿದ್ದಾರೆ. ಈ ಅಧಿಕಾರವನ್ನು ಎಇಇ ಬೋರೇಗೌಡರಿಗೆ ನೀಡಿದವರು ಯಾರು. ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರೂ ಅವರ ಮಾತನ್ನೂ ಧಿಕ್ಕರಿಸಿ ನೀಡುವ ಮೂಲಕ ನನಗೆ ಅನ್ಯಾಯವೆಸಗಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಸುಶೀಲಮ್ಮನವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಸದಸ್ಯರೂ ಆದ ವಿಪಕ್ಷ ನಾಯಕ ಹನುಮಂತು, ಅಧಿಕಾರಿಗಳು ಶಾಸಕರನ್ನು ಓಲೈಸಿಕೊಳ್ಳುವ ಸಲುವಾಗಿ ಅವರ ಗಮನಕ್ಕೆ ತಂದು ಖಾಸಗಿಯವರಿಗೆ ಅನುದಾನ ಹಂಚಿರುವುದು ಸದಸ್ಯರ ಹಕ್ಕನ್ನು ಕಸಿದುಕೊಂಡಂತಲ್ಲವೇ. ಇದರ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ ಎಂದು ಪ್ರಶ್ನಿಸಿದರು.

ಸುಶೀಲಮ್ಮ ಧರಣಿ: ಈ ಅನ್ಯಾಯವನ್ನು ಸ್ಥಳದಲ್ಲೇ ಪರಿಹರಿಸಿಕೊಡಬೇಕೆಂದು ಒತ್ತಾಯಿಸಿ ಸುಶೀಲಮ್ಮ ಅವರು ಸಭಾಂಗಣ ಮಧ್ಯೆ ಕುಳಿತು ಧರಣಿ ನಡೆಸಿದರು. ಇವರಿಗೆ ಮತ್ತೋರ್ವ ಸದಸ್ಯೆ ಸುನಂದಮ್ಮ ಕೂಡ ಸಾಥ್ ನೀಡಿದರು. ಇವರನ್ನು ಬೆಂಬಲಿಸಿ ಕಾಂಗ್ರೆಸ್ ಸದಸ್ಯರೂ ಹೋಗುತ್ತಿದ್ದಂತೆ ಜೆಡಿಎಸ್ ಸದಸ್ಯರಾದ ಅಶೋಕ್, ಯೋಗೇಶ್, ಅನುಪಮಾಕುಮಾರಿ ಸೇರಿದಂತೆ ಹಲವರು ಜಯಶೀಲಮ್ಮ ಅವರನ್ನು ಸಮಾಧಾನಪಡಿಸಿ, ಅನ್ಯಾಯ ಸರಿಪಡಿಸುವ ಭರವಸೆಯೊಂದಿಗೆ ಕರೆದೊಯ್ದು ಆಸನದಲ್ಲಿ ಕೂರಿಸಿದರು.

ಇನ್ನು ಸಭೆಗೆ ನಾಗಮಂಗಲ ವಿಭಾಗದ ಎಇಇ ಬೋರೇಗೌಡ ಗೈರಾಗಿದ್ದು, ಸದಸ್ಯರನ್ನು ಇನ್ನಷ್ಟು ಕೆರಳಿಸಿತು. ಸಭೆಗೆ ಬರದಿರುವುದಕ್ಕೆ ಅನುಮತಿ ಪಡೆದುಕೊಂಡಿದ್ದಾರೆಯೇ ಎಂದು ಸದಸ್ಯ ರಾಜೀವ್ ಪ್ರಶ್ನಿಸಿದಾಗ, ಇಲ್ಲ ಎಂದು ಸಿಇಒ ಕೆ.ಯಾಲಕ್ಕಿಗೌಡರು ತಿಳಿಸಿದರು. ಈ ವೇಳೆ ಇಇ ಬಸವರಾಜು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಸಭೆಗೆ ಬರುವಂತೆ ಹೇಳಿದರು. ಸಭೆಗೆ ಬೋರೇಗೌಡರು ಬರುತ್ತಿರುವ ವಿಷಯ ತಿಳಿದು ಅದಕ್ಕೂ ಮುನ್ನ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸದಸ್ಯ ರಾಜೀವ್ ಒತ್ತಾಯಿಸಿದಾಗ ಸಿಇಒ ಸಮ್ಮತಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿ, ಎಚ್.ಟಿ.ಮಂಜು ಇದ್ದರು.

Leave a Reply

Your email address will not be published. Required fields are marked *