ಮುಂದಿನ ವಾರವೇ ಬಸ್ ಪ್ರಯಾಣದರ ಏರಿಕೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಮಂಡ್ಯ: ಮುಂದಿನ ವಾರವೇ ಬಸ್ ಪ್ರಯಾಣದರ ಏರಿಕೆ ಮಾಡುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ತಿಳಿಸಿದ್ದು, ಸಾರ್ವಜನಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾರಿಗೆ ಬಸ್​ ದರದಲ್ಲಿ ಶೇ.18ರಷ್ಟು ಹೆಚ್ಚಳ ಮಾಡುವುದಾಗಿ ತಿಳಿಸಿದರು. ಇಂಧನ ದರ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕಾಗಿದೆ. ಅಲ್ಲದೆ, ನಾಳಿನ ಬಂದ್‌ಗೆ ಸಮ್ಮಿಶ್ರ ಸರ್ಕಾರ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಿದರು.

ಕಳೆದ ವಾರವೇ ಪ್ರಸ್ತಾವನೆ ಸಲ್ಲಿಕೆ
ಕಳೆದ ವಾರವಷ್ಟೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು ಏರುತ್ತಿರುವ ಇಂಧನ ದರದಿಂದ ಟಿಕೆಟ್ ದರ ಹೆಚ್ಚಳ ಮಾಡದೆ ವಿಧಿಯೇ ಇಲ್ಲ. ಈಗಾಗಲೇ ಶೇ.18ರಷ್ಟು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಜತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡು, ಟಿಕೆಟ್ ದರ ಏರಿಕೆ ಮಾಡುತ್ತೇವೆ. ತೈಲ ದರ ಏರಿಕೆಯಿಂದ ನಿಗಮಕ್ಕೆ 3 ತಿಂಗಳಿಂದ 180 ಕೋಟಿ ನಷ್ಟವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದರು. (ದಿಗ್ವಿಜಯ ನ್ಯೂಸ್​)