ಕಲೆಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ

ಮಂಡ್ಯ: ಜಿಲ್ಲೆಯಲ್ಲಿ ಜಾನಪದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಚಿನ್ಮಯ ಮಿಷನ್‌ನ ಶ್ರೀ ಸ್ವಾಮಿ ಆದಿತ್ಯಾನಂದ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪರಂಪರೆಯಲ್ಲಿ ಹಲವಾರು ಕಲೆಗಳಿವೆ. ಉತ್ತರ ಭಾರತದಲ್ಲಿ ಅವರದೇ ಆದ ಕಲೆ, ಸಂಸ್ಕೃತಿ ಕಾಣಬಹುದು. ದಕ್ಷಿಣ ಭಾರತದಲ್ಲಿ ಮತ್ತೊಂದು ರೀತಿಯ ಕಲೆ, ಸಂಸ್ಕೃತಿ ನೋಡಬಹುದು. ಕರಾವಳಿ ಒಕ್ಕೂಟ ಜಿಲ್ಲೆಯ ಜನತೆಗೆ ಯಕ್ಷಗಾನದ ರಸದೌತಣ ನೀಡಲು ಮುಂದಾಗಿದೆ ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿದರು. ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಮು, ಒಕ್ಕೂಟದ ಅಧ್ಯಕ್ಷ ಜಗನ್ನಾಥ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ.ಎಸ್.ಶ್ರೀನಿವಾಸ ಶೆಟ್ಟಿ, ಖಜಾಂಚಿ ಚಂದ್ರಶೇಖರ್ ಇತರರಿದ್ದರು.

ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಎ.ಜಯಲಕ್ಷ್ಮೀ ಹಾಗೂ ಬಿ.ಗೌಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಿಂಗರಾಜು ಅವರನ್ನು ಸನ್ಮಾನಿಸಲಾಯಿತು. ಯೋಗ ಶಿಕ್ಷಕರಾದ ಬಾಲಕೃಷ್ಣ, ನಂದನ್, ಯಕ್ಷಗಾನ ಗುರುಗಳಾದ ಮನೋಜ್ ಭಟ್ ಅವರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಕಾಂ, ಬಿಎಸ್ಸಿ, ಇಂಜಿನಿಯರಿಂಗ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ಮಂಡ್ಯ ಶಾಖೆಯ ವಿದ್ಯಾರ್ಥಿಗಳು ಚಕ್ರವ್ಯೆಹ- ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ ನೀಡಿದರು.