ಸಾಲಮನ್ನಾಕ್ಕೆ ಹೆಸರು ನೋಂದಾಯಿಸಿಕೊಳ್ಳಿ

ಬ್ಯಾಂಕ್‌ಗಳಲ್ಲಿ ಡಿ.28ರವರೆಗೆ ಅವಕಾಶ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮನವಿ

ಮಂಡ್ಯ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ತಂತ್ರಾಂಶ ಅನುಷ್ಠಾನಗೊಳಿಸಿದ್ದು, 2017ರ ಡಿ.31ರೊಳಗೆ ಬೆಳೆ ಸಾಲ ಪಡೆದಿರುವ ರೈತರು ಸಾಲ ಪಡೆದಿರುವ ವಾಣಿಜ್ಯ ಬ್ಯಾಂಕ್‌ನಲ್ಲಿ ಡಿ.28ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.

ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನಂತರ ರೈತರಿಗೆ ಕ್ರಮಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್ ನೀಡಿದ ದಿನಾಂಕಗಳಂದು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್‌ಕಾರ್ಡ್, ಪಡಿತರ ಚೀಟಿ ನಕಲು ಮತ್ತು ಭೂಮಿಯ ಸರ್ವೇ ನಂಬರ್ ವಿವರ ಒದಗಿಸಬೇಕು ಎಂದಿದ್ದಾರೆ.

2009 ಏ.1ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆಸಾಲ ಹಾಗೂ 2017 ಡಿ.31ರವರೆಗೆ ಬಾಕಿ ಇರುವ ಬೆಳೆಸಾಲ ಹಾಗೂ ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ. ಒಂದು ಕುಟುಂಬ ಗರಿಷ್ಠ 2 ಲಕ್ಷ ರೂ.ವರೆಗೆ ಮಾತ್ರ ಸಾಲ ಮನ್ನಾ ಪಡೆಯಲು ಅರ್ಹರಿದ್ದು, 2018 ಜು.5ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡ್ ಅನ್ನು ಕಡ್ಡಾಯವಾಗಿ ಸಲ್ಲಿಸುವವರನ್ನು ಮಾತ್ರ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಪ್ರತಿ ತಿಂಗಳು 15 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ ಎಂದು ಸೂಚನೆ ನೀಡಿದ್ದಾರೆ.

ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದ್ದು, ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ಅಧಿಕಾರಿಗಳೊಂದಿಗೆ ಸಹಕರಿಸಿ ಇದರ ಲಾಭ ಪಡೆಕೊಳ್ಳಬಹುದು ಎಂದಿದ್ದಾರೆ.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್ ನೀಡಲಾಗಿದ್ದು, ರೈತರಿಗೆ ಯಾವುದಾದರೂ ಗೊಂದಲಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಸಂಖ್ಯೆ 08232-231215 ಅಥವಾ 08232-231596 ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಎಸ್.ಮಂಜುಶ್ರೀ ಮನವಿ ಮಾಡಿದ್ದಾರೆ.