16ರಿಂದ ಅಭಿಯಂತರರ ರಂಗೋತ್ಸವ

ಮಂಡ್ಯ: ಇದೇ ಮೊದಲ ಬಾರಿಗೆ ನಗರದಲ್ಲಿ ಅಭಿಯಂತರರ ರಂಗವೇದಿಕೆಯಿಂದ ‘ರಂಗೋತ್ಸವ’ ಆಯೋಜಿಸಲಾಗುತ್ತಿದ್ದು, ವೇದಿಕೆಯ 25ನೇ ವಾರ್ಷಿಕೋತ್ಸವದ ಬೆಳ್ಳಿ ಹಬ್ಬದ ಆಚರಣೆ ಅಂಗವಾಗಿ ಎರಡು ನಾಟಕ ಪ್ರದರ್ಶನ ನಡೆಯಲಿದೆ.

ಇಂಜಿನಿಯರ್‌ಗಳಿಂದ, ಇಂಜಿನಿಯರ್‌ಗಳಿಗಾಗಿಯೇ ಸ್ಥಾಪಿತವಾಗಿರುವ ‘ಅಭಿಯಂತರರ ವೇದಿಕೆ’ಯಿಂದ ಜನದನಿ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಜೂ.16, 17ರಂದು ಮತ್ತು 18ರಂದು ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ರಂಗೋತ್ಸವ ಆಯೋಜಿಸಿದೆ ಎಂದು ವೇದಿಕೆ ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವಜನರು ಕನ್ನಡ ಮತ್ತು ಸಂಸ್ಕೃತಿಯ ಬಗ್ಗೆ ನಿರಾಸಕ್ತಿ ಹೊಂದುತ್ತಿರುವ ಹಿನ್ನೆಲೆ ಅವರನ್ನು ರಂಗಭೂಮಿಯತ್ತ ಸೆಳೆಯುವಂತೆ ಮಾಡಲು ವೃತ್ತಿಪರ ಇಂಜಿನಿಯರ್‌ಗಳು ಒಗ್ಗೂಡಿ ವೇದಿಕೆ ಪ್ರಾರಂಭಿಸಲಾಯಿತು. ಮೊದಲು ನಾಟಕಗಳ ಪ್ರದರ್ಶನ ಮಾಡಲಾಯಿತು. ನಂತರ ಕಂಸಾಳೆ ಪ್ರದರ್ಶನ, ವಿಚಾರಸಂಕಿರಣ, ಚಿತ್ರಕಲಾ ತರಬೇತಿ, ಪುಸ್ತಕ ಬಿಡುಗಡೆ ಕಾರ್ಯಕ್ರಮದ ಜತೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಂಗಭೂಮಿ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಎರಡು ನಾಟಕ ಪ್ರದರ್ಶನ: ಈ ಬಾರಿ ರಂಗೋತ್ಸವದಲ್ಲಿ ಜೂ.16ರಂದು ದುರಹಂಕಾರಿ ರಾಜಕೀಯ ನಾಯಕನ ಕುರಿತ ‘ಮರಣ ಮೃದಂಗ’ ಮತ್ತು 17ರಂದು ಹಾಸ್ಯದಿಂದ ಕೂಡಿರುವ ‘ಸೂಳೆ ಸನ್ಯಾಸಿ’ ನಾಟಕ ಪ್ರದರ್ಶನ ನೀಡಲಿದ್ದೇವೆ. ಅಂತೆಯೆ, 18ರಂದು ಸದ್ವಿದ್ಯಾ ರಂಗತಂಡದಿಂದ ಕರ್ಣ ಭಾರ ನಾಟಕ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನ ಪ್ರಾರಂಭವಾಗಲಿದ್ದು, ನಾಟಕದ ವೇಳೆ ಶಿಸ್ತು ಕಾಪಾಡುವ ಉದ್ದೇಶದಿಂದ 50 ರೂ. ಪ್ರವೇಶ ಶುಲ್ಕ ತೆಗೆದುಕೊಳ್ಳಲಾಗುವುದು ಎಂದರು.

ಈಗಾಗಲೇ ರಾಜ್ಯದ ವಿವಿಧೆಡೆ ಪ್ರಮುಖ ಉತ್ಸವಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದೇವೆ. ಇನ್ನು ಈ ವರ್ಷ ಎರಡು ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕಥೆ ಸಿದ್ಧಗೊಳ್ಳುತ್ತಿದೆ. ಅಂತೆಯೇ, ಅವಕಾಶ ಸಿಕ್ಕರೆ ಮಂಡ್ಯದಲ್ಲಿಯೂ ರಂಗಭೂಮಿ ಶಿಬಿರ ಆಯೋಜಿಸಲಾಗುವುದು ಎಂದರು.

16ಕ್ಕೆ ಉದ್ಘಾಟನೆ: 16ರಂದು ಸಂಜೆ 6.30ಕ್ಕೆ ರಂಗೋತ್ಸವದ ವೇದಿಕೆ ಕಾರ್ಯಕ್ರಮವನ್ನು ಪಿಇಟಿ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ಚೌಡಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ್‌ಗೌಡ, ವೇದಿಕೆ ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು ಭಾಗವಹಿಸಲಿದ್ದಾರೆ ಎಂದರು.

ವೇದಿಕೆ ಕಾರ್ಯದರ್ಶಿ ಬಿ.ಎಸ್. ತಾಂಡವಮೂರ್ತಿ, ಸಂಚಾಲಕ ರಮೇಶ್, ಜನದನಿ ಸಾಂಸ್ಕೃತಿಕ ಟ್ರಸ್ಟ್‌ನ ಸದಸ್ಯ ಹರೀಶ್ ಇದ್ದರು.

 

Leave a Reply

Your email address will not be published. Required fields are marked *