ಮಂಡ್ಯದಲ್ಲಿ ಸಿದ್ಧಗಂಗಾಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಣೆ

ಮಂಡ್ಯ: ನಡೆದಾಡುವ ದೇವರು ಡಾ.ಶಿವಕುಮಾರ ಮಹಾಸ್ವಾಮೀಜಿ ಅವರಿಗೆ ಸೋಮವಾರ ನಗರದ ವಿವಿಧೆಡೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಲ್ಲ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಗರದ ಸ್ವರ್ಣಸಂದ್ರದಲ್ಲಿರುವ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವದಲ್ಲಿ ಅವರ ಭಾವಚಿತ್ರನ್ನಿಟ್ಟು ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಡಾ.ಶಿವಕುಮಾರ ಮಹಾಸ್ವಾಮೀಜಿ ಅವರು ವಿಶ್ವಕ್ಕೆ ಧಾರ್ಮಿಕ ಗುರುವಿನ ಸ್ಥಾನದಲ್ಲಿ ನಿಂತು ಸೇವೆಯ ಮಹತ್ವ ತಿಳಿಸಿಕೊಟ್ಟಿದ್ದಾರೆ. ತ್ರಿವಿಧ ದಾಸೋಹದ ಮೂಲಕ ನಾಡಿನ ಕೋಟ್ಯಂತರ ವಿದ್ಯಾರ್ಥಿಗಳಿಗೆ ಜೀವನಕ್ಕೆ ನೆರವಾಗಿದ್ದಾರೆ. ವಿಶ್ವ ಶ್ರೇಷ್ಠ ಸೇವೆ ಮಾಡಿದ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಬೇಕಿದೆ ಎಂದರು.

ಮೈಸೂರಿನ ಬಸವ ಕೇಂದ್ರದ ಬಸವಯೋಗಿ ಪ್ರಭುಸ್ವಾಮಿ ಮಾತನಾಡಿ, ಸಿದ್ಧಗಂಗಾ ಮಠದ ಮುಂದಿನ ಮಠಾಧೀಶರು ಅವರು ನಡೆದು ಬಂದ ದಾರಿಯನ್ನು ಅನುಸರಿಸಬೇಕು. ನಾಡಿಗೆ ಕಾಯಕಯೋಗ, ಅನ್ನದಾಸೋಹ ಹಾಗೂ ಶಿವಯೋಗದ ಮೂಲಕ ಜಗತ್ತಿಗೆ ತ್ರಿವಿಧ ದಾಸೋಹದ ಪರಿಕಲ್ಪನೆ ತಿಳಿಸಿಕೊಟ್ಟಿದ್ದಾರೆ. ಅವರಂತೆ ನಾಡಿನ ಮಠಾಧೀಶರು ಮುನ್ನಡೆಯಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಅವರ ಆದರ್ಶ, ವಿಚಾರಧಾರೆ ನಮಗೆ ದಾರಿದೀಪ. ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯೆ, ಅನ್ನದಾನ ನೀಡಿ ನಮ್ಮ ನಡುವೆ ಸ್ಥಿರವಾಗಿ ನೆಲೆಗೊಂಡಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.\

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್, ವಕೀಲ ಗುರುಪ್ರಸಾದ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾಶ್ರೀಕಾಂತ್, ಮುಖಂಡರಾದ ಎಚ್.ಕೆ.ರುದ್ರಪ್ಪ, ಸುಂಡಹಳ್ಳಿ ಸೋಮಶೇಖರ್, ಶ್ರೀಧರ್, ಗೊರವಾಲೆ ರುದ್ರಪ್ಪ ಇದ್ದರು.

ಇನ್ನು ಉದ್ಯಾನಕ್ಕೆ ಆಗಮಿಸಿದ ಮುಸ್ಲಿಂ ಮುಖಂಡರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮುಜಾಹಿದ್, ಮುನ್ನಾ, ಆರಿಫ್, ಜಬೀವುಲ್ಲಾ ಇದ್ದರು.

ಶ್ರದ್ಧಾಂಜಲಿ ಸಭೆ: ನಗರದ ಚಾಮುಂಡೇಶ್ವರಿ ದೇವಾಲಯದ ಬಳಿ ಬಿಜೆಪಿ ಮುಖಂಡರು ಸ್ವಾಮೀಜಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಅನ್ನ, ವಸತಿ ಜತೆಗೆ ವಿದ್ಯಾದಾನ ಮಾಡಿದ ಸ್ವಾಮೀಜಿಗಳು ವಿಶ್ವಕ್ಕೆ ಮಾದರಿ. ಅವರು ಭಾರತದ ಕೀರ್ತಿ ಕಳಶವಾಗಿದ್ದು, ಒಂದು ಶಕ್ತಿಯಾಗಿದ್ದಾರೆ. ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಆದರ್ಶ ಸಮಾಜ ನಿರ್ಮಾಣ ಮಾಡಬೇಕು ಎಂದರು. ಮುಖಂಡರಾದ ಎಚ್.ಆರ್.ಅಶೋಕ್‌ಕುಮಾರ್, ಲೋಕೇಶ್, ಬಸವರಾಜು, ಹನುಮಂತು ಇದ್ದರು. ಇನ್ನು ನಗರದ ಡ್ಯಾಫೋಡಿಲ್ಸ್ ಹಾಗೂ ಗುಡ್‌ಷಫರ್ಡ್ ಶಾಲೆಯಲ್ಲಿ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸಿದರು.