ಹೆಣ್ಣು ಮಕ್ಕಳಿಗೆ ಬೇಕಿದೆ ಭದ್ರತೆ

ಮಂಡ್ಯ: ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ…ಭ್ರೂಣಹತ್ಯೆ ತಡೆಗೆ ಕಠಿಣ ಕಾನೂನಿಲ್ಲ… ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆ ನೀಡುವುದು ವಿಳಂಬವಾಗುತ್ತಿದೆ. ಇವುಗಳನ್ನು ಸರಿಪಡಿಸಲು ಸರ್ಕಾರ ಯಾವ ರೀತಿ ಕಾನೂನು ಜಾರಿಗೆ ತರಲಿದೆ…?ಇವು ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗಳು.

ಭೀಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಬರ್ಡ್ಸ್) ಸಂಸ್ಥೆ ಬುಧವಾರ ನಗರದ ವಾರ್ತಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳೇ ಪ್ರಶ್ನೆಗಳನ್ನು ಕೇಳಿದರು.

ಕೆ.ಆರ್.ಪೇಟೆಯ ಕಾವ್ಯಾ ಎಂಬ ವಿದ್ಯಾರ್ಥಿನಿ, ‘ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳ ನಿಯಂತ್ರಣವನ್ನು ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಮದ್ದೂರಿನ ಶ್ರೇಯಸ್,‘ ವಸತಿ ಶಾಲೆ ಹಾಗೂ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಮೂಲ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಇನ್ನೂ ಕೆಲ ವಿದ್ಯಾರ್ಥಿಗಳು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ವಿಳಂಬವಾಗುತ್ತಿದೆ. ತ್ವರಿತವಾಗಿ ಶಿಕ್ಷೆ ವಿಧಿಸಿದಲ್ಲಿ ಇಂಥ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರಲ್ಲಿ ಲೋಪಗಳಾಗುತ್ತಿವೆ. ಅದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದ ಕೆಲ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಲ್ಲೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಭಯದಿಂದಲೇ ಶಾಲೆಗೆ ತೆರಳುವಂತಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಿ ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳು ಕೇಳಿದ ಎಲ್ಲ ಪ್ರಶ್ನೆಗಳು, ಸಲಹೆಗಳನ್ನು ಸಂಗ್ರಹಿಸಿದ್ದು, ಇವುಗಳನ್ನು ನವೆಂಬರ್ ತಿಂಗಳಿನಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಗಮನಕ್ಕೆ ತರುವುದರ ಜತೆಗೆ ಶಾಸಕರ ಮೂಲಕ ಸದನದಲ್ಲಿ ಚರ್ಚಿಸಲು ಪ್ರಶ್ನೆಗಳನ್ನು ನೀಡಲಾಗುವುದು ಎಂದು ಬರ್ಡ್ಸ್ ಸಂಸ್ಥೆಯ ನಿರ್ದೇಶಕ ವೆಂಕಟೇಶ್ ತಿಳಿಸಿದರು.

ಜಿಲ್ಲೆಯ ವಿವಿಧ ಶಾಲೆಗಳ 70ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ರಾಜ್ಯಮಟ್ಟದ ಸಂಸತ್‌ಗೆ ನಗರದ ಕಾರ್ಮೆಲ್ ಕಾನ್ವೆಂಟ್‌ನ 10ನೇ ತರಗತಿಯ ಅಮೂಲ್ಯ, ಕೆ.ಆರ್.ಪೇಟೆ ಸರ್ಕಾರಿ ಪ.ಪೂ.ಕಾಲೇಜಿನ 10ನೇ ತರಗತಿಯ ಗಂಗಾರಾಮ್ ಆಯ್ಕೆಯಾದರು.

Leave a Reply

Your email address will not be published. Required fields are marked *