ಮಂಡ್ಯ ಜಿಲ್ಲೆಯ ಅಭಿವೃದ್ಧಿ ನನ್ನ ಜವಾಬ್ದಾರಿ: ಎಚ್‌ ಡಿ ಕುಮಾರಸ್ವಾಮಿ

ಮಂಡ್ಯ: ‘ಡಿಸ್ನಿಲ್ಯಾಂಡ್ ನನ್ನ ಕನಸಿನ ಕೂಸು’. ಯೋಜನೆಯನ್ನ ಮಾಡೇ ಮಾಡ್ತೀವಿ. ಪ್ರತಿಭಟನೆ ನಡೆಸುವವರಿಗೆ ಕೈ ಮುಗಿದು ಹೇಳುತ್ತೇನೆ. ಜಲಾಶಯಕ್ಕೆ ಧಕ್ಕೆ ಬಾರದ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಮನರಂಜನೆಗಾಗಿ ಯೋಜನೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತನ ಭೂಮಿ ವಶ ಪಡಿಸಿಕೊಳ್ಳುವುದಿಲ್ಲ. ಕನಿಷ್ಠ 40-50ಸಾವಿರ ಮಂದಿಗೆ ಜೀವನವಾಗಲಿದೆ. ಅನುಮಾನ ಇರುವವರ ಜತೆ ಬಹಿರಂಗ ಚರ್ಚೆಗೆ ಸಿದ್ಧ. ಯೋಜನೆ ಪೂರ್ಣಗೊಂಡರೇ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಮಂಡ್ಯ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಯೋಜನೆಗೆ ಚಿಂತನೆ ನಡೆಸಲಾಗಿದೆ. ನನಗೆ ಅಭಿವೃದ್ಧಿ ಮುಖ್ಯ. ರಾಜಕೀಯ ಮುಖ್ಯ ಅಲ್ಲ. ನನ್ನ ಸರ್ಕಾರ ಕಲ್ಲು ಬಂಡೆ ರೀತಿ ಇದೆ. ಚಾಮುಂಡೇಶ್ವರಿ ಡೆಡ್ ಲೈನ್ ಕೊಡ್ತಾಳೆ. ಮಾನವ ಕೊಡುವ ಡೆಡ್ ಲೈನ್ ನಂಬುವುದಿಲ್ಲ ಎಂದರು.

ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇಲ್ಲ. ಸಾಲಮನ್ನಾ ಮಾಡಿದ್ದಕ್ಕೆ ಹಣದ ಕೊರತೆ ಆಗಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ನನ್ನ ಜವಾಬ್ದಾರಿ. ಜಿಲ್ಲೆಯ ನೀರಾವರಿ ಸಮಗ್ರ ಅಭಿವೃದ್ಧಿಗೆ ನಾಲ್ಕೂವರೆ ಸಾವಿರ ಕೋಟಿ ಮೀಸಲಿಡಲಾಗಿದೆ. ಈ ಮೂಲಕ ಮಂಡ್ಯ ಜಿಲ್ಲೆಯ ಜನರ ಋಣ ತೀರಿಸಲಾಗುವುದು. ಹೈಟೆಕ್ ಮಿಷನರಿ ಅಳವಡಿಸಿ ಅತ್ಯುನ್ನತ ರೀತಿಯಲ್ಲಿ ಮಂಡ್ಯ ಮೈಷುಗರ್ ಕಾರ್ಖಾನೆ ಅಭಿವೃದ್ಧಿ, ರೈತರ ಕಬ್ಬು ಇಳುವರಿಗೆ ಸರ್ಕಾರದಿಂದ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆ ಪುನರಾರಂಭ ವಿಚಾರದಲ್ಲಿ ಚಲುವರಾಯಸ್ವಾಮಿ ರಾಜಕೀಯ ಮಾಡುತ್ತಾರೆ. ಪುಟ್ಟಣ್ಣಯ್ಯ ಬದುಕಿದ್ದರೆ ಕಾರ್ಖಾನೆ ಆರಂಭ ಆಗುತ್ತಿತ್ತು. ಪುಟ್ಟಣ್ಣಯ್ಯ ಶಾಸಕರಾಗಿದ್ದಾಗಲೇ PSSK ಕಾರ್ಖಾನೆ ಬಂದ್ ಆಯಿತು. ಅವರು ಯಾವುದೇ ಯಾತನೆ ಪಡುವುದು ಬೇಡ. ಜಿಲ್ಲೆಯ ಜನರ ಬಗ್ಗೆ ಅವರಿಗೆ ಅಪಾರ ಮಮತೆ ಇದೆ ಎಂದು ಹೆಸರೇಳದೆ ಚಲುವರಾಯಸ್ವಾಮಿಗೆ ಟಾಂಗ್ ನೀಡಿದರು.

ಹಿಂದಿನ ಸರ್ಕಾರಗಳು ಮಂಡ್ಯ ಜಿಲ್ಲೆಯನ್ನು ಕಡೆಗಣಿಸಿವೆ. ಮಂಡ್ಯ ಜಿಲ್ಲೆಯ ಮೇಲೆ ಅಪಾರ ಕಾಳಜಿ ಹೊಂದಿದ್ದೇನೆ. ಮಂಡ್ಯ ಜಿಲ್ಲೆಯ ಜತೆಗೆ ನಾಡಿನ ಅಭಿವೃದ್ಧಿಗೂ ಒತ್ತು ನೀಡಲಾಗುತ್ತದೆ. ಮಂಡ್ಯ ಜಿಲ್ಲೆ ಅಭಿವೃದ್ಧಿಗೆ 602 ಕೋಟಿ ರೂ. ಕೊಡುತ್ತಿದ್ದೇವೆ. 10 ಸಾವಿರ ಪಂಪ್​​ಸೆಟ್​ಗಳಿಗೆ 212 ಕೋಟಿ ರೂ. ವೆಚ್ಚದಲ್ಲಿ ಟಿಸಿಗಳ ಅಳವಡಿಕೆ, ಪ್ರವಾಸಿ ತಾಣ ಅಭಿವೃದ್ಧಿ, ಈ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. 3 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಫೆ.27ರಂದು ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)