ಮನುಷ್ಯನಿಗೆ ಮದ್ಯ, ಭುವಿಗೆ ಪ್ಲಾಸ್ಟಿಕ್ ಕಂಟಕ

ಮಂಡ್ಯ: ಮನುಷ್ಯನಿಗೆ ಮದ್ಯ ಹಾಗೂ ಭೂಮಿಗೆ ಪ್ಲಾಸ್ಟಿಕ್ ಕಂಟಕವಾಗಿದೆ. ಆದ್ದರಿಂದ ಜನತೆ ಮದ್ಯ ಸೇವನೆಯಿಂದ ದೂರ ಉಳಿಯಬೇಕು. ಜನತೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ನಗರಸಭೆ ಆಯುಕ್ತ ಲೋಕೇಶ್ ಮನವಿ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಹೊಸಹಳ್ಳಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಹೊಸಹಳ್ಳಿಯ ಪ್ರಗತಿಬಂಧು ಸ್ವ ಸಹಾಯ ಸಂಘ ಸಂಸ್ಥೆಗಳ ವತಿಯಿಂದ ಸೋಮವಾರ ನಗರದ ಹೊಸಹಳ್ಳಿ ಖಾಸಗಿ ಕಲ್ಯಾಣ ಮಂಟಪದಲ್ಲಿ 9 ದಿನಗಳ ಕಾಲ ಹಮ್ಮಿಕೊಂಡಿರುವ 1393ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ದಿನೇ ದಿನೆ ಕುಡುಕರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕುಡಿತದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜತೆಗೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಸಾಮಾಜಿಕವಾಗಿಯೂ ಕುಟುಂಬ ಅವಮಾನಕ್ಕೆ ಒಳಗಾಗುತ್ತದೆ ಎಂದು ಹೇಳಿದರು.

ಮದ್ಯಸೇವನೆ ಬಿಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿರುವುದಕ್ಕೆ ನಾವು ಚಿರಋಣಿ ಆಗಿರಬೇಕು. ಶಿಬಿರದ ಸೌಲಭ್ಯವನ್ನು ಮದ್ಯ ಸೇವನೆ ಮಾಡುವವರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಸಂಸ್ಥೆಯ ಯೋಜನಾಧಿಕಾರಿ ಸದಾನಂದ ಬಂಗೇರ, ಮುದ್ದುರಾಜು, ನೈಸರ್ಗಿಕ ಕೃಷಿಕ ಕೆರಗೋಡು ಅನಂತರಾವ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಬೋರೇಗೌಡ, ಬಸವೇಶ್ವರ ಬೋರ್‌ವೆಲ್ಸ್ ಮಾಲೀಕ ಡಾ. ಎಸ್.ನಾರಾಯಣ್, ಬಸವೇಶ್ವರ ಪತ್ತಿನ ಸೌಹಾರ್ದ ಕೇಂದ್ರದ ಎಸ್.ಮಂಜು, ಕೇಬಲ್ ಮನು ಉಪಸ್ಥಿತರಿದ್ದರು.

ಶಿಬಿರದಲ್ಲಿ ಪಾಳ್ಗೊಳ್ಳಲು 100ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ವಿವೇಕ ವಿನ್ಸೆಂಟ್ ಪಾಯಸ್, ಎನ್.ಭಾಸ್ಕರ್, ನಂದಕುಮಾರ್, ಪ್ರಶೀಲ, ಶಂಕರ್ ನಾರಾಯಣ ಶಾಸ್ತ್ರಿ ಮದ್ಯ ಬಿಡಿಸುವುದಕ್ಕೆ ಚಿಕಿತ್ಸೆ ಮತ್ತು ಉಪನ್ಯಾಸ ನೀಡಲಿದ್ದಾರೆ.

Leave a Reply

Your email address will not be published. Required fields are marked *