ಇಂದಿನಿಂದ ಭತ್ತ ಖರೀದಿ ಆರಂಭ

ಮಂಡ್ಯ: ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರಿಂದ ಭತ್ತವನ್ನು ಖರೀದಿಸಲು ರೈಸ್‌ಮಿಲ್ ಮಾಲೀಕರಿಗೆ ಹೇಳಿದ್ದು ಶನಿವಾರದಿಂದ ಭತ್ತ ಖರೀದಿ ಕಾರ್ಯ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೂ 4 ರೈಸ್‌ಮಿಲ್ ಮಾಲೀಕರು ಬ್ಯಾಂಕ್ ಗ್ಯಾರಂಟಿ ನೀಡಿ ನೋಂದಣಿ ಮಾಡಿಕೊಂಡಿದ್ದಾರೆ. ಆ ರೈಸ್‌ಮಿಲ್ಗಳ ಮೂಲಕ ನೋಂದಾಯಿತ ರೈತರ ಭತ್ತ ಸಂಗ್ರಹಣಾ ಕಾರ್ಯ ಪ್ರಾರಂಭಿಸಲಾಗುವುದು. ಸಂಗ್ರಹಣಾ ಏಜೆನ್ಸಿಯಾದ ರಾಜ್ಯ ಉಗ್ರಾಣ ನಿಗಮದವರು ರೈತರನ್ನು ನೋಂದಾಯಿತ ರೈಸ್‌ಮಿಲ್ಗಳಿಗೆ ಮ್ಯಾಪಿಂಗ್ ಮಾಡಿದ ನಂತರ ಎಸ್‌ಎಂಎಸ್ ತಲುಪುವ ವ್ಯವಸ್ಥೆ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಜಿಲ್ಲೆಯ ಉಳಿದ ಎಲ್ಲ ರೈಸ್‌ಮಿಲ್ ಮಾಲೀಕರು ಕೂಡಲೇ ನೋಂದಣಿ ಮಾಡಿಕೊಂಡು ರೈತರಿಂದ ಭತ್ತದ ಸಂಗ್ರಹಣಾ ಕಾರ್ಯವನ್ನು ಪ್ರಾರಂಭಿಸುವಂತೆ ಕೋರಿದರು.

ರೈತರ ನೆರವಿಗೆ ರೈಸ್‌ಮಿಲ್ಲರ್‌ಗಳು ಮುಂದೆ ಬರಬೇಕು. ಕನಿಷ್ಠ 250 ಕ್ವಿಂಟಾಲ್ಗಳಿಗಾದರೂ ರೈಸ್ ಮಿಲ್ಲರ್‌ಗಳು ಹೆಸರು ನೋಂದಾಯಿಸಿಕೊಳ್ಳಬೇಕು. ನೂತನ ಪದ್ಧತಿಯಲ್ಲಿ ಗೋದಾಮುಗಳ ವ್ಯವಸ್ಥೆ ಕಡ್ಡಾಯವಾಗಿ ಇರಲೇಬೇಕು.

ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ 3, ಮಂಡ್ಯ ತಾಲೂಕಿನ ಒಬ್ಬರು ಅಕ್ಕಿ ಗಿರಣಿದಾರರು ನೋಂದಾಯಿಸಿಕೊಂಡಿದ್ದು, ಇವರು ಶ್ರೀರಂಗಪಟ್ಟಣ, ಪಾಂಡವಪುರ ಮತ್ತು ಮಂಡ್ಯ ತಾಲೂಕು ವ್ಯಾಪ್ತಿಯ ನೋಂದಾಯಿತ ರೈತರ ಭತ್ತದ ಖರೀದಿಸಲಿದ್ದಾರೆ.

ಉಳಿದ ತಾಲೂಕುಗಳಲ್ಲಿಯೂ ಶೀಘ್ರ ಭತ್ತ ಖರೀದಿ ಪ್ರಾರಂಭಿಸಲಾಗುವುದು. ರೈತರ ಹಿತದೃಷ್ಠಿಯಿಂದ ಜ.10ರೊಳಗೆ ಉಳಿದ ರೈಸ್‌ಮಿಲ್ ಮಾಲೀಕರು ಭತ್ತವನ್ನು ಸಂಗ್ರಹಿಸಲು ಮುಂದೆ ಬರಬೇಕೆಂದು ಕೋರಿದರಲ್ಲದೆ, ಸಮರ್ಪಕವಾಗಿ ಭತ್ತ ಖರೀದಿಗೆ ಅಗತ್ಯ ಕ್ರಮವಹಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕಿ ಕುಮುದಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾ ಸುಲೋಚನಾ, ರಾಜ್ಯ ಉಗ್ರಾಣ ನಿಗಮದ ನೋಡಲ್ ಅಧಿಕಾರಿ ಭಾಗವತ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅಕ್ಕಿ ಗಿರಣಿ ಮಾಲೀಕರು ಭಾಗವಹಿಸಿದ್ದರು.