2ನೇ ದಿನವೂ ಬೃಹತ್ ಪ್ರತಿಭಟನೆ

ಮಂಡ್ಯ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಬುಧವಾರ ಕೂಡ ವಿವಿಧ ಸಂಘಟನೆಗಳ ಸದಸ್ಯರು ಬೃಹತ್ ಮೆರವಣಿಗೆ ನಡೆಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನ ಬಳಿ ಜಮಾಯಿಸಿದ ಸಿಐಟಿಯು, ಜನವಾದಿ, ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರು ಹಾಗೂ ವಿವಿಧ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಜನತೆ ಬೆಂಗಳೂರು – ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದರು.

ಅಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು, ಬೆಲೆ ಏರಿಕೆ ತಡೆಗಟ್ಟಿ, ಉದ್ಯೋಗ ಸೃಷ್ಟಿಸಬೇಕು. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗಾಗಿ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಕಾರ್ಪೋರೇಟ್ ಕಂಪನಿಗಳ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಬಾರದು. ಮೋಟಾರು ವಾಹನ 2017ರ ಮಸೂದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಮತ್ತಿತರ ಸ್ಕೀಂ ನೌಕರರನ್ನು ಕಾಯಂಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, 6000ರೂ. ಮಾಸಿಕ ನಿವೃತ್ತಿ ವೇತನ ನೀಡಬೇಕು. ಬೋನಸ್ ಮಿತಿ ತೆಗೆಯಬೇಕು. ಇಪಿಎಫ್ ಹಣವನ್ನು ಷೇರು ಮಾರುಕಟ್ಟೆಗೆ ಹಾಕಬಾರದು, ಇಎಸ್‌ಐ ಅನ್ನು ರಿಲೆಯನ್ಸ್ ನಿರ್ವಹಣೆಗೆ ಕೊಡಬಾರದು.

ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಮತ್ತು ಬ್ಯಾಂಕ್, ವಿಮಾ, ರಕ್ಷಣಾ ವಲಯಗಳಲ್ಲಿ ಎಫ್‌ಡಿಐ ಬೇಡ. 18,000ರೂ. ಕನಿಷ್ಠ ವೇತನ, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆ ನೀಡಬೇಕು. ಭೂಮಿ ಹಕ್ಕು, ಮನೆ, ನಿವೇಶನ ಹಕ್ಕುಪತ್ರ ಕೊಡಬೇಕು. ಮೈಷುಗರ್ ಕಾರ್ಖಾನೆ ಖಾಸಗೀಕರಣ ಮಾಡಬಾರದು. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಬಾರದು. ದಲಿತ, ಆದಿವಾಸಿ, ಅಲ್ಪಸಂಖ್ಯಾತ ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಬೇಕು. ಹಾಲಿನ ದರ ಕಡಿತ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ರಾಷ್ಟ್ರದಲ್ಲಿ ಶ್ರೀಮಂತ ಉದ್ಯಮಿಗಳು ನೆಮ್ಮದಿಯಾಗಿದ್ದು, ಬಡವರು, ಮಧ್ಯಮ ವರ್ಗದ ಜನತೆ ಬಳಸುವ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜನರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ತಕ್ಷಣ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರ ಮೂಲಕ ಮನವಿ ಸಲ್ಲಿಸಿದರು.

ಪ್ರೊ.ಜಿ.ಟಿ.ವೀರಪ್ಪ, ಪ್ರೊ.ಮಹದೇವು, ಕೆ.ರಾಜು, ಸಿ.ಕುಮಾರಿ, ಪ್ರಮೀಳಾಕುಮಾರಿ, ದೇವೇಗೌಡ, ಚಂದ್ರು, ಪುಷ್ಪಾ, ಮಂಗಳಾ, ಪುಷ್ಪಾವತಿ, ಸಾಹೇರಬಾನು, ರಿಜ್ವಾನ್ ಸೇರಿ ಸಾವಿರಾರು ಜನತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *