ಒಣಗಿದ ಬೆಳೆಗೆ ಪರಿಹಾರ ಕೊಡಿ

ಮಂಡ್ಯ: 39ನೇ ವರ್ಷದ ರೈತರ ಹುತಾತ್ಮರ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಕಾರ್ಯಕರ್ತರು ಬಳಿಕ ಅಲ್ಲಿಯೇ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು. ಪರಿಣಾಮ, ಕೆಲವೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸತತ ಬರಗಾಲದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಾರಿಯೂ ಸರಿಯಾದ ಸಮಯಕ್ಕೆ ನೀರು ಬಿಡದ ಕಾರಣ ಬೆಳೆ ಒಣಗಿದೆ. ಆದ್ದರಿಂದ, ಕೂಡಲೇ ಬೆಳೆಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಸಕ್ಕರೆ ಕಾರ್ಖಾನೆಗಳು ನೀಡಬೇಕಾದ ಬಾಕಿ ಹಣವನ್ನು ಶೀಘ್ರದಲ್ಲಿ ಪಾವತಿಸಲು ಕ್ರಮ ವಹಿಸಬೇಕು. ಮೈಶುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಕೂಡಲೇ ಪ್ರಾರಂಭಿಸಬೇಕು.ಡಾ.ಸ್ವಾಮಿನಾಥನ್ ವರದಿಯ ಶಿಫಾರಸನ್ನು ಅನುಷ್ಠಾನಕ್ಕೆ ತಂದು ಕಬ್ಬು, ರೇಷ್ಮೆ, ಬಾಳೆ ಮುಂತಾದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ವಿರೋಧಿಯಾಗಿರುವ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕ್ರಮ ವಹಿಸಬೇಕು. ಮದ್ದೂರು ತಾಲೂಕಿನ ಆತಗೂರು ಹೋಬಳಿಯಲ್ಲಿ ಜಮೀನಿನ ರೀ ಸರ್ವೇಯಲ್ಲಿ ಆಗಿರುವ ಗೊಂದಲ ನಿವಾರಣೆಗೆ ಭೂ ದಾಖಲೆ ತಜ್ಞರ ಸಮಿತಿ ರಚಿಸಬೇಕು. ಜಿಲ್ಲೆಯಲ್ಲಿ ಎಲ್ಲ ಕೆರೆಕಟ್ಟೆಗಳ ಹೂಳು ತೆಗೆಸಬೇಕು. ಹಾಲಿನ ದರ ಕುಸಿದಿದ್ದು, ಲೀಟರ್‌ಗೆ 30 ರೂ. ಬೆಲೆ ನಿಗದಿ ಮಾಡಬೇಕು. ರೇಷ್ಮೆಗೂಡಿನ ಬೆಲೆಯೂ ಕುಸಿತವಾಗಿದ್ದು, ಪ್ರೋತ್ಸಾಹಧನವನ್ನು ಕೆಜಿಗೆ 50 ರೂ. ಹೆಚ್ಚಿಸಬೇಕು. ಹಾಗೂ ಡಾ.ಬಸವರಾಜು ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಇಂಡುವಾಳು ಚಂದ್ರಶೇಖರ್, ಹೆಮ್ಮಿಗೆ ಚಂದ್ರಶೇಖರ್, ಇಂಡುವಾಳು ಬಸವರಾಜು, ಸಿ.ಸ್ವಾಮಿಗೌಡ, ಕೆ.ನಾಗೇಂದ್ರ, ಕೆ.ರಾಮಲಿಂಗೇಗೌಡ, ಸೊ.ಶಿ.ಪ್ರಕಾಶ್ ಸೊಳ್ಳೇಪುರ, ಕೆ.ಜಿ.ಉಮೇಶ್, ಜೆ.ದಿನೇಶ್, ಶೇಖರ್, ಶ್ರೀಕಂಠಯ್ಯ, ವೈ.ಕೆ.ರಾಮೇಗೌಡ, ಸಿ.ರಮೇಶ್ ಇತರರಿದ್ದರು.

Leave a Reply

Your email address will not be published. Required fields are marked *