ಸ್ವಚ್ಛತೆ ಕಡೆಗೆ ನಮ್ಮ ನಡಿಗೆ

ಮಂಡ್ಯ: ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ರೂಪಿಸುತ್ತಿರುವ ಗ್ರಾಮೀಣ ಭಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತ ಆಂದೋಲನಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕೈ ಜೋಡಿಸಿದ್ದಾರೆ.

ಹಳ್ಳಿಗಳನ್ನು ತ್ಯಾಜ್ಯ ಮುಕ್ತವಾಗಿಸುವುದರ ಜತೆಗೆ ಸ್ವಚ್ಛವಾಗಿರುವಂತೆ ಮಾಡುವ ಉದ್ದೇಶದಿಂದ ಜಿಪಂ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಯೋಜನೆ ಯಶಸ್ವಿಯಾಗಬೇಕಾದರೆ ಪ್ರಮುಖ ಪಾತ್ರ ವಹಿಸುವ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಹೊಸ ವರ್ಷದ ಸಂಕಲ್ಪ: ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷೆ ಎಸ್.ನಾಗರತ್ನಸ್ವಾಮಿ, ಸ್ವಚ್ಛತೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೂ ಅರಿವು ಮೂಡಿಸಬೇಕು. ಆದ್ದರಿಂದ, ತ್ಯಾಜ್ಯ ಮುಕ್ತ ಗ್ರಾಮ ನಿರ್ಮಿಸಬೇಕೆಂದು ‘ಸ್ವಚ್ಛತೆ ಕಡೆಗೆ ನಮ್ಮ ನಡಿಗೆ’ ಎಂಬ ಹೊಸ ವರ್ಷದ ಸಂಕಲ್ಪ ಮಾಡೋಣ ಎಂದು ಘೋಷಣೆ ಕೂಗಿದರು. ಇದಕ್ಕೆ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಬೆಂಬಲ ಸೂಚಿಸಿ ಸಂಕಲ್ಪ ಮಾಡಿದರು.

ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ನಮ್ಮ ಹಳ್ಳಿಯನ್ನು ನಾವು ಸ್ವಚ್ಛ ಮಾಡಿದರೆ ಗೌರವ ಕಡಿಮೆಯಾಗುವುದಿಲ್ಲ. 141 ದೇಶ ಕೆಲ ವಿಷಯದಲ್ಲಿ ನಮ್ಮನ್ನು ಅವಲಿಂಬಿಸಿದೆ. ಆದರೆ, ನಾವು ಸ್ವಚ್ಛತೆಯಲ್ಲಿ ಹಿಂದುಳಿಯುತ್ತಿದ್ದೇವೆ. ಜತೆಗೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿಯೂ ದೇಶದೊಳಗಿನ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ನಾವೂ ಸ್ವಚ್ಛತೆಯಲ್ಲಿ ಹಿಂದುಳಿಯುವುದು ಬೇಡ. ಎಲ್ಲರೂ ಕೈ ಜೋಡಿಸಿ ಸ್ವಚ್ಛ ಮಂಡ್ಯ ಜಿಲ್ಲೆಯನ್ನು ಮಾಡೋಣ ಎಂದು ಮನವಿ ಮಾಡಿದರು.

ಜಿಪಂ ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಜಿಪಂ ಮುಖ್ಯಲೆಕ್ಕಾಧಿಕಾರಿ ರವಿಕುಮಾರ್, ಮುಖ್ಯ ಯೋಜನಾಧಿಕಾರಿ ಧನುಷ್, ಯೋಜನಾ ನಿರ್ದೇಶಕ(ಡಿಆರ್‌ಡಿಎ) ಗಣಪತಿ ಸಿ.ನಾಯ್ಕ, ತಾಪಂ ಇಒಗಳು ಇದ್ದರು.

Leave a Reply

Your email address will not be published. Required fields are marked *