ರಕ್ಷಿತ್, ಅನನ್ಯ ಅರುಂಬಕಮ್ ಮುನ್ನಡೆ

ಮಂಡ್ಯ: ರಾಜ್ಯ ಮಟ್ಟದ 15 ವರ್ಷದೊಳಗಿನ ಬಾಲಕ/ಬಾಲಕಿಯರ ಚೆಸ್ ಟೂರ್ನಿಯ 4ನೇ ಸುತ್ತಿನಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ರಕ್ಷಿತ್ ಶ್ರೀನಿವಾಸನ್, ಬಾಲಕಿಯರ ವಿಭಾಗದಲ್ಲಿ ಅನನ್ಯ ಅರುಂಬಕಮ್ ಅಧಿಕ ಅಂಕ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.

ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಸಹಯೋಗದೊಂದಿಗೆ ಮಂಡ್ಯ ಚೆಸ್ ಅಕಾಡೆಮಿ ಎಸ್.ಬಿ.ಸಮುದಾಯ ಭವನದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ 204 ಬಾಲಕರು, 140 ಬಾಲಕಿಯರು ಸೇರಿ 344 ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಶುಕ್ರವಾರ ಆರಂಭವಾದ ಟೂರ್ನಿಯಲ್ಲಿ 7, 9, 11 ಮತ್ತು 13 ವರ್ಷದೊಳಗಿನವರ ವಿಭಾಗದ 3 ಸುತ್ತಿನ ಪಂದ್ಯಗಳು ನಡೆದವು. ಶನಿವಾರ 15 ವರ್ಷದೊಳಗಿನ ವಿಭಾಗದ ನಾಲ್ಕು ಸುತ್ತು ಸ್ಪರ್ಧೆಗಳು ನಡೆದವು.

ಬಾಲಕರ ವಿಭಾಗದಲ್ಲಿ ರಕ್ಷಿತ್ ಶ್ರೀನಿವಾಸನ್ ಜತೆಗೆ ತೇಜಸ್‌ಕುಮಾರ್, ಕೆ.ಪ್ರದ್ಯುಮ್ನ ಕುಮಾರ್, ಟಿ.ಅನಿಲ್ ಅಧಿಕ ಅಂಕ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಅನನ್ಯ ಅರುಂಬಕಮ್ ಜತೆಗೆ ಸಾನಿಕೊಮ್ಮು ಮನಸ್ವಿ, ಶ್ರೀಯಾನ ಎಸ್.ಮಲ್ಯ, ಕೆ.ದೀಪ್ತಿಲಕ್ಷ್ಮೀ ಉತ್ತಮ ಅಂಕ ಗಳಿಸಿದ್ದಾರೆ.

ಶುಕ್ರವಾರ ಚಾಲನೆ: ಕರ್ನಾಟಕ ಚೆಸ್ ಸಂಘದ ಕಾರ್ಯದರ್ಶಿ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ ಜಂಟಿ ಕಾರ್ಯದರ್ಶಿ ಆರ್.ಹನುಮಂತ ಶುಕ್ರವಾರ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಚೆಸ್ ಪಾನ್‌ಗಳನ್ನು ಮೂವ್ ಮಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.

ಮಂಡ್ಯ ಜಿಲ್ಲಾ ಚೆಸ್ ಸಂಸ್ಥೆ ಅಧ್ಯಕ್ಷ ಟಿ.ವರಪ್ರಸಾದ್, ಎಸ್.ಬಿ.ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಲಯನ್ಸ್ ಸಂಸ್ಥೆಯ ಜಿಲ್ಲಾ ಉಪರಾಜ್ಯಪಾಲ ಡಾ.ಜಿ.ಎ.ರಮೇಶ್, ಅಕಾಡೆಮಿ ಕಾರ್ಯದರ್ಶಿ ಮಂಜುನಾಥ್ ಜೈನ್, ಕಾಮನ್‌ವೆಲ್ತ್ ಆಟಗಾರ್ತಿ ಮಾಧುರಿ ಜೈನ್, ಪತ್ರಕರ್ತ ಕೆ.ಎನ್.ರವಿ, ಲಯನ್ಸ್ ಸಂಸ್ಥೆಯ ಪ್ರತಿಮಾ ರಮೇಶ್ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *