ಕಾವೇರಿ ಗ್ರಾಮೀಣ ಬ್ಯಾಂಕ್ ನೌಕರರ ಪ್ರತಿಭಟನೆ

ಮಂಡ್ಯ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಬೆಂಬಲಿಸಿ ಕಾವೇರಿ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟ, ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಬ್ಯಾಂಕಿನ ಎದುರು ಜಮಾಯಿಸಿದ ಸಿಬ್ಬಂದಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಸುಪ್ರೀಂ ತೀರ್ಪಿನಂತೆ ವಾಣಿಜ್ಯ ಬ್ಯಾಂಕಿನಲ್ಲಿ ಜಾರಿ ಇರುವ 1993ರ ನಿವೃತ್ತಿ ವೇತನ ಯೋಜನೆ ಜಾರಿಗೊಳಿಸಬೇಕು. ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು. ಮತ್ತು ದಿನಗೂಲಿ ನೌಕರರ ಹೊರಗುತ್ತಿಗೆ ರದ್ದುಪಡಿಸಬೇಕು. ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣ ನಿಲ್ಲಬೇಕು. ರಾಜ್ಯಮಟ್ಟದ ಬ್ಯಾಂಕುಗಳನ್ನು ಒಳಗೊಂಡ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕು.

ವಾಣಿಜ್ಯ ಬ್ಯಾಂಕುಗಳಲ್ಲಿರುವ ನೇಮಕಾತಿ ಮತ್ತು ಬಡ್ತಿ ನಿಯಮಗಳು ಗ್ರಾಮೀಣ ಬ್ಯಾಂಕುಗಳಿಗೂ ಜಾರಿಯಾಗಬೇಕು. ಕೇಂದ್ರ ಕಾರ್ಮಿಕ ಸಂಘಟನೆಗಳ 12 ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿ.ಆರ್.ಗಂಗಾಧರ್, ಶಿವಲಿಂಗೇಗೌಡ, ನಾಗರಾಜು, ಸತ್ಯಾನಂದಸ್ವಾಮಿ, ಸುರೇಶ್, ಪುಟ್ಟಸ್ವಾಮಿ, ನಟರಾಜ್ ಮೊದಲಾದವರಿದ್ದರು.