ಜೆಡಿಎಸ್-ಬಿಜೆಪಿ ‘ಲೋಕ ಸಮರ’ ಪ್ರಾರಂಭ

ಮಂಡ್ಯ: ಮಂಡ್ಯ ಕ್ಷೇತ್ರದ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ನಡುವಿನ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ.
ಜೆಡಿಎಸ್‌ನಿಂದ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯಿಂದ ಡಾ.ಸಿದ್ದರಾಮಯ್ಯ, ಪಕ್ಷೇತರ ಅಭ್ಯರ್ಥಿಯಾಗಿ ನವೀನ್ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಂದೀಶ್‌ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಸೋಮವಾರ ಮಧ್ಯಾಹ್ನ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಹಾಗೂ ಕೆ.ಜೆ.ಜಾರ್ಜ್ ಅವರ ಜತೆ ತೆರಳಿ ಒಂದು ಸೆಟ್ ನಾಮಪತ್ರ ಸಲ್ಲಿಸಿದರು. ಪತ್ನಿ ಜತೆ ತೆರಳಿ ನಾಮಪತ್ರ ಸಲ್ಲಿಸಿದರೆ ಅದೃಷ್ಟವೆಂಬ ಕಾರಣದಿಂದ ಮತ್ತೊಮ್ಮೆ ಪತ್ನಿ ಸುಧಾ ಅವರ ಜತೆ ತೆರಳಿ 3 ಸೆಟ್ ನಾಮಪತ್ರ ಸಲ್ಲಿಸಿದರು. ಹಾಗಾಗಿ, ಅವರು ಒಟ್ಟು 4 ಸೆಟ್ ನಾಮಪತ್ರ ಸಲ್ಲಿಸಿದಂತಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಮಂಗಳವಾರ ನಾಮಪತ್ರ ಸಲ್ಲಿಸುವುದಾಗಿ ಮೊದಲು ಹೇಳಿದ್ದರು. ಆದರೆ, ಕೆಲವರ ಸಲಹೆ ಮೇರೆಗೆ ಒಳ್ಳೆಯ ದಿನ ಎಂಬ ಕಾರಣದಿಂದ ಸೋಮವಾರವೇ ನಾಮಪತ್ರ ಸಲ್ಲಿಸಿದರು.
ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತೆರಳಿದ ಮುಖಂಡರು, ಕಾರ್ಯಕರ್ತರು, ಗೆಲುವಿನ ಹುಮ್ಮಸ್ಸಿನಲ್ಲಿ ಕೇಸರಿ ಬಾವುಟ ಹಾರಿಸುತ್ತ ಉಮೇದುವಾರಿಕೆ ಸಲ್ಲಿಸಿದರು. ಆದರೆ, ಬಿಜೆಪಿ ರಾಜ್ಯ ನಾಯಕರಾರೂ ಕಾಣಲಿಲ್ಲ. ಮಂಗಳವಾರ ಸಮಾವೇಶ ಇರುವುದರಿಂದ ಹೆಚ್ಚಿನ ಜನರನ್ನು ಸೇರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಚುನಾವಣೆಯಲ್ಲಿ ರೈತಸಂಘ ತಟಸ್ಥ:
ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ವಿವಿಧ ಹಂತಗಳಲ್ಲಿ ಸಭೆ ನಡೆಸಿದ್ದ ರೈತ ಸಂಘ, ಇದೀಗ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲು ನಿರ್ಧರಿಸಿದೆ. ಸೋಮವಾರ ಮಧ್ಯಾಹ್ನದಿಂದ ಸಂಜೆತನಕ ಕಾವೇರಿ ವನದಲ್ಲಿ ಸುದೀರ್ಘ ಸಭೆ ನಡೆಸಿದ ಮುಖಂಡರು, ಸುನೀತಾ ಪುಟ್ಟಣ್ಣಯ್ಯ ಅವರನ್ನು ಕಣಕ್ಕಿಳಿಸಲು ಒತ್ತಡ ಹೇರಿದರು. ಆದರೆ, ಅವರು ನಿರಾಕರಿಸಿದ್ದರಿಂದ ನಂದಿನಿ ಜಯರಾಂ ಅವರನ್ನು ಒಪ್ಪಿಸಲು ಯತ್ನಿಸಿದರು. ಅವರೂ ನಿರಾಕರಿಸಿದ ಪರಿಣಾಮ ತಟಸ್ಥವಾಗಿ ಉಳಿಯಲು ನಿರ್ಧರಿಸಿದರು.
ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಶಂಭೂನಹಳ್ಳಿ ಸುರೇಶ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಕಾಣದ ಕಾಂಗ್ರೆಸ್ ನಾಯಕರು
ಉಪ ಚುನಾವಣೆಯಲ್ಲಿ ದೋಸ್ತಿ ಇಷ್ಟವಿಲ್ಲದಿದ್ದರೂ ಸ್ಥಳೀಯ ಕಾಂಗ್ರೆಸ್ಸಿಗರು ವರಿಷ್ಠರ ಮಾತಿಗೆ ಕಟ್ಟುಬಿದ್ದಿದ್ದಾರೆ. ಆದರೆ, ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಲು ಸಚಿವ ಕೆ.ಜೆ.ಜಾರ್ಜ್ ಆಗಮಿಸಿದ್ದರೂ ಸ್ಥಳೀಯ ಮಾಜಿ ಶಾಸಕರು ಸುಳಿಯಲಿಲ್ಲ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಖಜಾಂಚಿ ಅಮರಾವತಿ ಚಂದ್ರಶೇಖರ್ ಸೇರಿದಂತೆ ಕೆಲವರು ಆಗಮಿಸಿದರಾದರೂ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿತ್ತು. ನಗರದಲ್ಲೇ ಇದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಆಗಮಿಸದಿದ್ದುದು ಚರ್ಚೆಗೆ ಗ್ರಾಸವಾಯಿತು.
ಜೆಡಿಎಸ್-ಕಾಂಗ್ರೆಸ್ ದೋಸ್ತಿಯಾಗಿ ಸ್ಪರ್ಧೆಗಿಳಿದಿರುವ ಪರಿಣಾಮ ಉಭಯ ಪಕ್ಷಗಳ ಕಾರ್ಯಕರ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಜೆಡಿಎಸ್‌ಗೆ ಕೊಂಚ ಹಿನ್ನಡೆಯಾದಂತೆ ಕಂಡುಬಂದಿತು. ಕಾಂಗ್ರೆಸ್ ಬಾವುಟಗಳು ಅಪರೂಪಕ್ಕೆ ಕಂಡುಬಂದಿದ್ದು, ಶಿವರಾಮೇಗೌಡರಿಗೆ ತುಸು ಸಮಾಧಾನ ತಂದಿತು.
ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮದವರ ಜತೆ ಮಾತನಾಡಿದ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಪ್ರಸ್ತುತ ಚುನಾವಣೆ ನಡೆಯುತ್ತಿರುವ ಐದು ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಮಿತ್ರ ಪಕ್ಷಗಳ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸಮ್ಮಿಶ್ರ ಸರ್ಕಾರ ಯಾವುದೇ ತೊಂದರೆ ಇಲ್ಲದೆ 5 ವರ್ಷ ಪೂರೈಸಲಿದೆ. ಹಾಗಾಗಿ ಮೈತ್ರಿ ಕೂಟದ ಅಭ್ಯರ್ಥಿ ಗೆಲ್ಲಿಸಲು ಪಣ ತೊಟ್ಟಿದ್ದೇವೆ ಎಂದರು.
ಕೆಳ ಹಂತದ ನಾಯಕರ ಜತೆ ಮಾತುಕತೆ ನಡೆಸಿ ಎಲ್ಲರನ್ನು ಒಗ್ಗೂಡಿಸುತ್ತೇವೆ. 22 ರಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಲಾಗುವುದು. ಕಾಂಗ್ರೆಸ್‌ನ ಎಲ್ಲ ಮುಖಂಡರು ಶಿವರಾಮೇಗೌಡರ ಪರ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಕ್ಷ್ಮೀ ಅಶ್ವಿನ್‌ಗೌಡ ಗೈರು:
ಜೆಡಿಎಸ್ ಟಿಕೆಟ್ ಸಿಗಲಿದೆ ಎಂಬ ಕಾರಣದಿಂದ ಐಆರ್‌ಎಸ್ ಹುದ್ದೆಗೆ ರಾಜೀನಾಮೆ ನೀಡಿ ಬಂದಿದ್ದ ಲಕ್ಷ್ಮೀ ಅಶ್ವಿನ್‌ಗೌಡ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಕ್ಕೆ ಒಳಗಾಗಿರುವುದು ಸಾಬೀತಾಯಿತು.
ಶಿವರಾಮೇಗೌಡರು ನಾಮಪತ್ರ ಸಲ್ಲಿಸುವ ವೇಳೆ ಲಕ್ಷ್ಮೀ ಅಶ್ವಿನ್‌ಗೌಡ ಹಾಜರಿರುತ್ತಾರೆ ಎಂಬ ನಂಬಿಕೆ ಪಕ್ಷದ ಮುಖಂಡರಲ್ಲಿತ್ತು. ಆದರೆ, ಅವರ ಗೈರುಹಾಜರಾಗಿ, ವರಿಷ್ಠರ ನಿರ್ಧಾರವನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂಬಂತಿತ್ತು.
ಶಿವರಾಮೇಗೌಡ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮದವರ ಜತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಕಾಂಗ್ರೆಸ್, ಜೆಡಿಎಸ್ ನಾಯಕರ ಮಾತುಕತೆಯಂತೆ ಮಂಡ್ಯದಲ್ಲಿ ಒಗ್ಗಟ್ಟಾಗಿದ್ದೇವೆ. ಈ ಹಿಂದೆಯೂ ಕೆಲ ಚುನಾವಣೆಗಳಲ್ಲಿ ಒಗ್ಗಟ್ಟಾಗಿದ್ದೆವು. ಈಗಲೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಭಾರಿ ಅಂತರದಿಂದ ಗೆಲ್ಲಿಸಲಿದ್ದೇವೆ. ಟಿಕೆಟ್ ವಂಚಿತ ಲಕ್ಷ್ಮೀ ಅಶ್ವಿನ್‌ಗೌಡರಿಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ. ಅವರೂ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರನ್ನು ಆಯ್ಕೆ ಮಾಡಿರುವುದಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ.
ಡಿ.ಸಿ ತಮ್ಮಣ್ಣ ಸಾರಿಗೆ ಸಚಿವ