ವೆಲ್ಲೆಸ್ಲಿ ಸೇತುವೆ ಬಳಿಯ ಬನ್ನಿಮಂಟಪ ಧ್ವಂಸ ಆರೋಪ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿಯ ವೆಲ್ಲೆಸ್ಲಿ ಸೇತುವೆ ಸಮೀಪವಿದ್ದ ಐತಿಹಾಸಿಕ ಬನ್ನಿಮಂಟವನ್ನು ಪಟ್ಟಭದ್ರ ಹಿತಾಸಕ್ತಿಗಳು ಧ್ವಂಸ ಮಾಡಿದ್ದಲ್ಲದೆ, ಕಾವೇರಿ ನದಿಯ ಖರಾಬು ಜಮೀನು ಕಬಳಿಸಿ ಆರ್‌ಟಿಸಿ ಮಾಡಿಸಿದ್ದಾರೆ ಎಂದು ರೈತಪರ ಹೋರಾಟಗಾರ ಕಿರಂಗೂರು ಪಾಪು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

ಕೆಲವು ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಸೇರಿ ಆರ್‌ಟಿಸಿ ಕೂರಿಸಿ ಕೋಟ್ಯಂತರ ರೂ.ಗಳಿಗೆ ಮಾರಾಟ ಮಾಡಿ ರೆಸಾರ್ಟ್ ಹಾಗೂ ಕಮರ್ಷಿಯಲ್ ಕಟ್ಟಡ ನಿರ್ಮಿಸಲು ಹೊರಟಿದ್ದಾರೆ. ಈ ಸಂಬಂಧ ತಹಸೀಲ್ದಾರ್, ಜಿಲ್ಲಾಧಿಕಾರಿ, ಪ್ರಾಚ್ಯವಸ್ತು ಇಲಾಖೆಗೆ ದೂರು ಸಲ್ಲಿಸಿದ್ದು, ಯಾರೊಬ್ಬರೂ ಕ್ರಮ ಕೈಗೊಳ್ಳುವುದಿರಲಿ ಕನಿಷ್ಠ ಸ್ಥಳ ಪರಿಶೀಲನೆಯನ್ನೂ ಮಾಡಿಲ್ಲ. ಇದನ್ನು ಗಮನಿಸಿದರೆ ಬನ್ನಿಮಂಟಪ ಧ್ವಂಸದ ಹಿಂದೆ ಅಧಿಕಾರಿಗಳ ಪಾತ್ರವೂ ಇರುವ ಶಂಕೆಯಿದೆ ಎಂದು ಆರೋಪಿಸಿದ್ದಾರೆ.

ಆದ್ದರಿಂದ ತಾವು ತಕ್ಷಣ ಗಮನಹರಿಸಿ, ಕೂಲಂಕಷ ತನಿಖೆ ನಡೆಸಿ ಬನ್ನಿಮಂಟಪ ಪುನರ್‌ನಿರ್ಮಾಣ ಹಾಗೂ ಒತ್ತುವರಿಯಾಗಿರುವ ಕಾವೇರಿ ನದಿಯ ಖರಾಬನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಲ್ಲದೆ, ಒತ್ತುವರಿ ಮಾಡಿರುವವರ ವಿರುದ್ಧ ಕಾನೂನುರೀತ್ಯಾ ಕ್ರಮ ಜರುಗಿಸಬೇಕೆಂದು ಅವರು ಕೋರಿದ್ದಾರೆ.

ದೂರು ಸ್ವೀಕರಿಸಿದ ವಿಜಯಭಾಸ್ಕರ್ ಕೂಲಂಕಷವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಪಾಪು ವಿಜಯವಾಣಿಗೆ ತಿಳಿಸಿದ್ದಾರೆ.

ತಹಸೀಲ್ದಾರ್ ವಿರುದ್ಧವೂ ದೂರು: ಶ್ರೀರಂಗಪಟ್ಟಣ ತಹಸೀಲ್ದಾರ್ ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ.

2018 ಆ.1ರ ಮಧ್ಯಾಹ್ನ 3ರಿಂದ 3.30ರ ಸಮಯದಲ್ಲಿ ಬನ್ನಿಮಂಟಪ ಧ್ವಂಸ ಮಾಡಿರುವ ಬಗ್ಗೆ ದೂರು ಆಧರಿಸಿ ಕ್ರಮ ಕೈಗೊಂಡಿರುವ ಬಗ್ಗೆ ತಹಸೀಲ್ದಾರ್‌ರನ್ನು ಕೇಳಲು ಹೋಗಿದ್ದೆ. ನನ್ನನ್ನು ಪರಿಗಣಿಸದೆ ಅವರು ರಿಯಲ್‌ಎಸ್ಟೇಟ್ ಉದ್ಯಮಿ ಜತೆ ಮೊಬೈಲ್‌ನಲ್ಲಿ ನಿವೇಶನ ಖರೀದಿ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಕೋಟಿಗಟ್ಟಲೆ ಹಣದ ನಿವೇಶನವನ್ನು ಅಗ್ರಿಮೆಂಟ್ ಮಾಡಿಸೋಣ, ಬ್ಲಾಕ್ ಮನಿ ನೀಡುವುದೋ? ಅಥವಾ ವೈಟ್ ಮನಿ ನೀಡಿದರೆ ಸರಿಯೋ? ಅಗ್ರಿಮೆಂಟ್‌ಗೆ ವೈಟ್ ಮನಿ ನೀಡೋಣ, ರಿಜಿಸ್ಟ್ರೇಷನ್‌ಗೆ ದರ ಕಡಿಮೆ ಮಾಡಿಸಿ ಆಮೇಲೆ ಅವರಿಗೆ ಸೆಂಟ್ಲಮೆಂಟ್‌ನಲ್ಲಿ ಬ್ಲಾಕ್ ಮನಿ ನೀಡಿದರೆ ಸರಿಯಾಗುತ್ತದೆ ಎಂದು ಸಂಭಾಷಣೆ ಮಾಡುತ್ತಿದ್ದರು. ಈ ಸಂಬಂಧ ಕಚೇರಿಯ ಸಿಸಿ ಕ್ಯಾಮರಾ ಫುಟೇಜ್ ಪರಿಶೀಲಿಸಿ ತನಿಖೆ ಮಾಡಬೇಕೆಂದು ಅವರು ಕೋರಿದ್ದಾರೆ.