ಬಂದ್ ಬೆಂಬಲಿಸಿ ಸರಣಿ ಪ್ರತಿಭಟನೆ

ಮಂಡ್ಯ : ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿ ನಗರದಲ್ಲಿ ಸರಣಿ ಪ್ರತಿಭಟನೆ ನಡೆದವು.

ಕೈ ಪಾದಯಾತ್ರೆ: ಇಂಧನ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಾದಯಾತ್ರೆ ನಡೆಸಲಾಯಿತು.

ಜಯಚಾಮರಾಜೇಂದ್ರ ವೃತ್ತದಲ್ಲಿ ಜಮಾವಣೆಗೊಂಡ ಕೈ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸುವುದರ ಜತೆಗೆ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೊಳಲು ವೃತ್ತ, ಪೇಟೆಬೀದಿ, ಕಾಮನ ವೃತ್ತದ ಮೂಲಕ ಬಂದ ಪಾದಯಾತ್ರೆ ಮಹಾವೀರ ವೃತ್ತದಲ್ಲಿ ಮುಕ್ತಾಯಗೊಳಿಸಲಾಯಿತು. ಹೊಳಲು ವೃತ್ತದಲ್ಲಿ ಕೈ ಕಾರ್ಯಕರ್ತರು, ಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಸಂಪಗಿ, ರವಿಕುಮಾರ್ ಗಣಿಗ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ವಿಜಯಲಕ್ಷ್ಮೀ ಇತರರಿದ್ದರು.

ಕನ್ನಡಪರ ಸಂಘಟನೆಗಳ ರ‌್ಯಾಲಿ: ಬಂದ್ ಬೆಂಬಲಿಸಿ ಕರವೇ(ಶಿವರಾಮೇಗೌಡ ಬಣ) ಮತ್ತು ಕರವೇ(ನಾರಾಯಣಗೌಡ ಬಣ) ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.

ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ನೆರೆ ದೇಶದಲ್ಲಿ ಪೆಟ್ರೋಲ್ ದರ ಲೀ.ಗೆ 40 ಇದೆ. ಆದರೆ, ನಮ್ಮಲ್ಲಿ 83 ರೂ.ಗಳನ್ನು ದಾಟುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರವೇ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ನಗರಾಧ್ಯಕ್ಷ ಟಿ.ಕೆ.ಸೋಮಶೇಖರ್, ಕಲಾವಿದ ಪ್ರಕಾಶ್, ರೈತ ಸಂಘದ ಸುಧೀರ್‌ಕುಮಾರ್ ಇತರರಿದ್ದರು. ಕರವೇ(ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಶಂಕರೇಗೌಡ, ಮಾ.ಸೋ.ಚಿದಂಬರ್, ಅಶೋಕ್ ಇತರರಿದ್ದರು.

ಬಿಎಸ್ಪಿ, ಸಿಪಿಐ(ಎಂ) ಪ್ರತಿಭಟನೆ: ಬಿಎಸ್ಪಿ ಕಾರ್ಯಕರ್ತರು ಜಯಚಾಮರಾಜೇಂದ್ರ ವೃತ್ತದಲ್ಲಿ ಮತ್ತು ಸಿಪಿಐ(ಎಂ) ಕಾರ್ಯಕರ್ತರು ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಿಪಿಐ(ಎಂ)ನ ಮಂಡ್ಯ ವಲಯ ಸಮಿತಿ ಕಾರ್ಯದರ್ಶಿ ಸಿ.ಕುಮಾರಿ, ಸುರೇಂದ್ರ, ನಾರಾಯಣ, ಪುಟ್ಟಮ್ಮ, ಗಾಯತ್ರಿ, ಪ್ರಮೀಳಾಕುಮಾರಿ ಇತರರಿದ್ದರು. ಬಿಎಸ್ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ನರಸಿಂಹಮೂರ್ತಿ, ಮಹೇಶ್, ಶಿವಣ್ಣ, ಹೊನ್ನಯ್ಯ, ಮಧುಕುಮಾರ್ ಇತರರಿದ್ದರು.