ಭಾರತ್ ಬಂದ್‌ಗಿಲ್ಲ ಸ್ಪಂದನೆ

ಮಂಡ್ಯ : ತೈಲ ಹಾಗೂ ಇತರೆ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲಿ ಜನಸಾಮಾನ್ಯರು ಸರಿಯಾಗಿ ಸ್ಪಂದಿಸಲಿಲ್ಲ.

ಶಾಲೆಗಳಿಗೆ ರಜೆ ಘೋಷಣೆ, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ರದ್ದಾಗಿದ್ದರ ನಡುವೆಯೂ ಅಪರೂಪಕ್ಕೆ ಒಂದೆರಡು ಬಸ್‌ಗಳು ರಸ್ತೆಗಿಳಿದವು. ಆದರೆ ಖಾಸಗಿ ಹಾಗೂ ಸರ್ಕಾರಿ ನೌಕರರು ಕೆಲಸಕ್ಕೆ ತೆರಳಲು ಹಾಗೂ ತುರ್ತು ಕೆಲಸಗಳಿಗೆ ಹೋಗಬೇಕಾದವರು ಪರದಾಡಿದರು.

ಆಟೋಗಳು, ಗೂಡ್ಸ್ ಆಟೋಗಳು, ಬೈಕ್, ಕಾರುಗಳ ಸಂಚಾರ ಜೋರಾಗಿತ್ತು. ಆಟೋಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದರಿಂದ ಮಾಹಿತಿ ಇಲ್ಲದೆ ಬಂದ ಜನತೆ ಕೈ ಸುಟ್ಟುಕೊಂಡರು. ಬಸ್‌ಗಳಿಲ್ಲ ಎಂಬುದನ್ನು ಕಂಡು ಕೂಡ ಕೆಲವರು ಬಸ್ ನಿಲ್ದಾಣಗಳಲ್ಲಿ ಕಾದು ಕಾದು ಹೈರಾಣಾಗಿ ಬಂದ್ ಕರೆಗೆ ಶಾಪ ಹಾಕುತ್ತಿದ್ದ ಸನ್ನಿವೇಶಗಳು ಕಂಡುಬಂದವು.

ಬಂದ್ ಮಾಡಿಸಲು ಕೆಲ ಕಾಂಗ್ರೆಸ್ಸಿಗರು ಮೆರವಣಿಗೆಯಲ್ಲಿ ತೆರಳಿದಾಗ ಅಂಗಡಿ ಮಾಲೀಕರು ಗೊಣಗಿಕೊಂಡೇ ಬಾಗಿಲು ಮುಚ್ಚಿದರು. ಅವರು ಸ್ವಲ್ಪ ದೂರಕ್ಕೆ ಹೋಗುತ್ತಿದ್ದಂತೆ ಮತ್ತೆ ಬಾಗಿಲು ತೆರೆದರು. ಇದು ಆಗಾಗ ಪುನರಾವರ್ತನೆಯಾಯಿತು.

ನಗರದ ಗುತ್ತಲು ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ, ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಬಹುತೇಕ ಅಂಗಡಿಗಳು ಬಾಗಿಲು ತೆರೆದಿದ್ದವು. ಪೇಟೆ ಬೀದಿ, ವಿವಿ ರಸ್ತೆ, ಆರ್.ಪಿ. ರಸ್ತೆಯಲ್ಲಿ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಆಗಮಿಸಿದಾಗ ಬಂದ್ ಆಗಿ, ಅವರು ತೆರಳಿದ ಬಳಿಕ ಬಾಗಿಲು ತೆರೆದುಕೊಂಡವು.

ತರಕಾರಿ ಮಾರುಕಟ್ಟೆಯಲ್ಲಿ ಹಲವರು ಬಂದ್‌ಗೆ ವಿರೋಧಿಸಿ, ಎಂದಿನಂತೆ ವಹಿವಾಟು ನಡೆಸಿದರು. ಮಾತ್ರವಲ್ಲ, ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿ ಪ್ರತಿಭಟನಾಕಾರರಿಗೆ ತಿರುಗೇಟು ನೀಡಿದರು. ಸಿನಿಮಾ ಮಂದಿರ, ಪೆಟ್ರೋಲ್ ಬಂಕ್‌ಗಳು, ಇಂದಿರಾ ಕ್ಯಾಂಟೀನ್ ಜತೆಗೆ ಎಲ್ಲ ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬಂದ್ ವಿರೋಧಿಸಿ ನಗರ ಬಿಜೆಪಿ ಅಧ್ಯಕ್ಷ ಬೇಕರಿ ಅರವಿಂದ್ ಉಚಿತವಾಗಿ ಬಾದಾಮಿ ಹಾಲು ವಿತರಿಸಿದರು. ಅವರಿಗೆ ನಗರಸಭಾ ಸದಸ್ಯ ಅರುಣ್‌ಕುಮಾರ್, ಮುಖಂಡರಾದ ಮಲ್ಲಿಕಾರ್ಜುನ್, ಮಂಜುನಾಥ್, ಮಹೇಶ್ ಮೊದಲಾದವರಿದ್ದರು.

ಬೀದಿಗಿಳಿಯದ ಜೆಡಿಎಸ್ ಕಾರ್ಯಕರ್ತರು : ಒಂದೆಡೆ ದೋಸ್ತಿ ಕಾಂಗ್ರೆಸ್ ಪಕ್ಷ ಭಾರತ್ ಬಂದ್ ಯಶಸ್ವಿಗೆ ಶ್ರಮಿಸಿ ಅಲ್ಲಲ್ಲಿ ರಸ್ತೆ ಸಂಚಾರ ತಡೆಸಿ ಪ್ರಧಾನಿ ಮೋದಿ ಹಾಗೂ ಪೆಟ್ರೋಲಿಯಂ ಸಚಿವ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರೆ, ಬಂದ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದ ಜೆಡಿಎಸ್ ಕಾರ್ಯಕರ್ತರು ರಸ್ತೆಗಿಳಿಯಲಿಲ್ಲ.

ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಅನತಿ ದೂರದಲ್ಲಿ ಕುಳಿತಿದ್ದ ಕಾರ್ಯಕರ್ತರು ಪ್ರತಿಭಟನೆ ಬಳಿ ತಲೆ ಹಾಕಲಿಲ್ಲ. ಉಳಿದೆಡೆ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ಇಳಿಯಲೇ ಇಲ್ಲ. ಮಾತ್ರವಲ್ಲ, ಒಂದೇ ಒಂದು ಹೇಳಿಕೆಯನ್ನು ನೀಡದೆ ಇರುವುದೇಕೆಂಬ ಪ್ರಶ್ನೆ ಕಾಂಗ್ರೆಸ್ಸಿಗರು ಮಾತ್ರವಲ್ಲ, ಸಾಮಾನ್ಯ ಜನರನ್ನು ಕಾಡಿತು.