ಸರ್ಕಾರದ ನೀತಿಯಿಂದ ಕೃಷಿ ಬಿಕ್ಕಟ್ಟು

ಮಂಡ್ಯ: ಸರ್ಕಾರದ ನೀತಿಗಳಿಂದಾಗಿ ಕೃಷಿ ಬಿಕ್ಕಟ್ಟು ಪರಿಹಾರವಾಗದೆ ರೈತರು ಆರ್ಥಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಆರ್.ನಾಗಮೋಹನದಾಸ್ ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ಬುಧವಾರ ಸಂಜೆ ಡಾ.ಜಿ.ಮಾದೇಗೌಡ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘19ನೇ ರಾಜ್ಯಮಟ್ಟದ ಡಾ.ಜಿ.ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಸಮಾಜಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ವಿಶ್ವದಲ್ಲಿ ಕೃಷಿಯಿಂದ ಎಲ್ಲ ನಾಗರಿಕತೆಗಳು ಹುಟ್ಟಿ ಬೆಳೆದಿವೆ. ಆದರೆ, ಜಗತ್ತಿನಲ್ಲಿ ಕೃಷಿ ಮಾಡುವ ರೈತನೊಬ್ಬನೇ ಅತ್ಯಂತ ಹೆಚ್ಚು ಶೋಷಣೆಗೆ ಒಳಗಾಗಿದ್ದಾನೆ. ರೈತ ತನ್ನದೆ ಸಂಪನ್ಮೂಲದ ಮೂಲಕ ಸ್ವಾವಲಂಬಿಯಾಗಿ ಕೃಷಿ ಕಾರ್ಯ ಮಾಡಿದರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಕೃಷಿ ಬಿಕ್ಕಟ್ಟು ಹೆಚ್ಚಾಗಿ ನೋವನ್ನು ಸಹಿಸಲಾಗದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೆ. ಸರ್ಕಾರ ತೆಗೆದುಕೊಳ್ಳುವ ನೀತಿ ಮತ್ತು ಜಾರಿಗೊಳಿಸುವ ಯೋಜನೆ ಪರಿಣಾಮವಾಗಿ ಕೃಷಿ ಭೂಮಿ ಬರಡಾಗಿ ನಿಕೃಷ್ಟ ಜೀವನ ಸಾಗಿಸುವಂತಾಗಿದೆ ಎಂದರು.

ಚುನಾವಣೆ ಪೂರ್ವದಲ್ಲಿ ಎಲ್ಲ ಪಕ್ಷ ರೈತಪರ ಪ್ರಣಾಳಿಕೆ ಹೊರಡಿಸುತ್ತವೆ. ಆದರೆ, ಬಳಿಕ ರೈತ ವಿರೋಧಿ ನೀತಿ ಅನುಸರಿಸುತ್ತಿವೆ. 2004ರಲ್ಲಿ ಎಂ.ಎಸ್.ಸ್ವಾಮಿನಾಥನ್ ರೈತರ ಅಭಿವೃದ್ಧಿಗಾಗಿ ಕೆಲ ಅಂಶಗಳನ್ನೊಳಗೊಂಡ ವರದಿ ಸಲ್ಲಿಸಿದ್ದಾರೆ. 15 ವರ್ಷವಾದರೂ ವರದಿ ಕುರಿತು ಒಂದು ಗಂಟೆ ಚರ್ಚೆ ಮಾಡಿಲ್ಲ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಅಭಿವೃದ್ಧಿ ಕುರಿತು ಚರ್ಚೆ ಮಾಡಬೇಕು. ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾವಯವ ಕೃಷಿಕ ಪ್ರಶಸ್ತಿ ಸ್ವೀಕರಿಸಿದ ಪ್ರಗತಿಪರ ರೈತ ಬಿ.ಜೆ.ಕುಮಾರಸ್ವಾಮಿ ಮಾತನಾಡಿ, ರೈತ ಸಮಾಜದಲ್ಲಿ ಅತ್ಯಂತ ನಿರ್ಲಕ್ಷೃಕ್ಕೆ ಒಳಗಾದವನಾಗಿದ್ದಾನೆ. ಪರಿಣಾಮ ಶೇ.90ಕ್ಕೂ ಹೆಚ್ಚು ರೈತರು ಕೃಷಿಯಿಂದ ವಿಮುಖರಾಗುವ ಚಿಂತನೆಯಲ್ಲಿದ್ದಾರೆ. ಈಗಲಾದರೂ ಸರ್ಕಾರ ರೈತರ ನೆರವಿಗೆ ಧಾವಿಸುವ ಮೂಲಕ ಕೃಷಿ ವಿಮುಖ ಮನೋಭಾವ ದೂರವಾಗುವಂತೆ ಮಾಡಬೇಕು. ಇಲ್ಲವಾದರೆ ತುತ್ತು ಅನ್ನಕ್ಕೂ ಪರಿತಪಿಸುವ ಕಾಲ ಬರುತ್ತದೆ ಎಂದರು.

ಮಾಜಿ ಸಂಸದ ಡಾ.ಜಿ.ಮಾದೇಗೌಡ, ಭಾರತೀ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಧು ಜಿ.ಮಾದೇಗೌಡ, ಸಾಹಿತಿ ಡಾ.ದೊಡ್ಡರಂಗೇಗೌಡ, ಡಾ.ಜಿ.ಮಾದೇಗೌಡ ಪ್ರತಿಷ್ಠಾನದ ಅಧ್ಯಕ್ಷ ಬಿ.ಬಸವರಾಜು, ಮುಖಂಡರಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಪ್ರೊ.ಬಿ.ಎಸ್.ಬೋರೇಗೌಡ, ಡಾ.ಮ.ರಾಮಕೃಷ್ಣ, ಪ್ರೊ.ಮಾಯಿಗೌಡ ಇದ್ದರು.

ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಇದ್ಯಾವುದರ ಚಿಂತೆಯಿಲ್ಲದೆ ಅಧಿಕಾರ ಹಾಗೂ ವೈಯಕ್ತಿಕ ಹಿತಕ್ಕಾಗಿ ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾದರೆ, ಅವರನ್ನು ಕನಿಷ್ಠ 10 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ಜಾರಿಗೊಳಿಸಬೇಕು.
ಎಚ್.ಎಸ್.ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿ

 

Leave a Reply

Your email address will not be published. Required fields are marked *