13ರಿಂದ ಸೇನಾ ನೇಮಕಾತಿ ರ‌್ಯಾಲಿ

 ಮಂಡ್ಯ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅ.13 ರಿಂದ 19ರವರೆಗೆ ಭಾರತೀಯ ಸೇನೆಗೆ ನೇಮಕಾತಿ ರ‌್ಯಾಲಿ ನಡೆಯಲಿದ್ದು, ಈ ಸಂಬಂಧ ಈಗಾಗಲೇ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಭಾರತೀಯ ಸೇನೆಯ ನೇಮಕಾತಿ ವಿಭಾಗದ ನಿರ್ದೇಶಕ ನವರತನ್ ಸಿಬಿಯ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆ.28ರಿಂದ ನೋಂದಣಿ ಆರಂಭಗೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಭಾರತೀಯ ಸೇನೆಯ ಡಿಡಿಡಿ ವೆಬ್‌ಸೈಟ್‌ನಲ್ಲಿ ನೇಮಕಾತಿಗೆ ಸಂಬಂಧಿಸಿದ ಪೂರ್ಣ ಮಾಹಿತಿ ಲಭ್ಯವಿದೆ. ಅಭ್ಯರ್ಥಿಗಳು ನೋಂದಣಿ ಮಾಡುವಾಗ ಕಡ್ಡಾಯವಾಗಿ ತಮ್ಮ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಬೇಕು. ಅಲ್ಲದೆ ನೋಂದಣಿಗೆ ಸಂಬಂಧಿಸಿದಂತೆ ಇತರೆ ಮಾಹಿತಿಗೆ ದೂರವಾಣಿ ಸಂಖ್ಯೆ 080-22966517ಯನ್ನು ಸಂಪರ್ಕಿಸಬಹುದು. ಯಾವುದೇ ಕಾರಣಕ್ಕೂ ನೋಂದಣಿ ಸಮಯದಲ್ಲಿ ತಪ್ಪು ಮಾಹಿತಿ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ನೇಮಕಾತಿಗೆ ಸಂಬಂಧಪಟ್ಟ ಭಾರತೀಯ ಸೇನೆಯ ಅಧಿಕಾರಿಗಳು ಆಗಮಿಸುತ್ತಿದ್ದು, ಅವರ ವಾಸ್ತವ್ಯಕ್ಕೆ ವ್ಯವಸ್ಥೆಯಾಗಬೇಕು. ಪೊಲೀಸ್ ಇಲಾಖೆಯಿಂದ ಕ್ರೀಡಾಂಗಣದ ಸುತ್ತ ಭದ್ರತೆ ಒದಗಿಸಬೇಕು. ರ‌್ಯಾಲಿ ವೇಳೆ ಸಾರ್ವಜನಿಕರ ಕ್ರೀಡಾಂಗಣದ ಒಳಗೆ ಬರದಂತೆ ಎಚ್ಚರವಹಿಸಬೇಕು. ನೇಮಕಾತಿ ಮೆರಿಟ್ ಹಾಗೂ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದು ಹೇಳಿದರು.

ಅಭ್ಯರ್ಥಿಗಳ ದೈಹಿಕ ಫಿಟ್ನೆಸ್ ಪರೀಕ್ಷಿಸಲು 1.6 ಕಿಮೀ ಓಟ ಸೇರಿದಂತೆ ಇತರೆ ಪರೀಕ್ಷೆಯನ್ನು ಸ್ವತಂತ್ರ ಅಧಿಕಾರಿಗಳ ತಂಡದಿಂದ ನಡೆಸಲಾಗುತ್ತಿದ್ದು, ಆರ್ಮಿಯ ವೈದ್ಯಕೀಯ ತಂಡದ ವೈದ್ಯರಿಂದ ದೈಹಿಕ ಮಾಪನ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗುತ್ತಾರೆ ಎಂದು ನವರತನ್ ಸಿಬಿಯ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಜಿಲ್ಲೆಯ ಎಲ್ಲ ಅಧಿಕಾರಿಗಳು ರ‌್ಯಾಲಿ ಯಶಸ್ವಿಯಾಗಿ ನಡೆಸಲು ಭಾರತೀಯ ಸೇನೆಯ ನೇಮಕಾತಿ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ನೇಮಕಾತಿ ಅಧಿಕಾರಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಬೇಕಾಗುವ ಸೌಲಭ್ಯವನ್ನು ಅಧಿಕಾರಿಗಳು ಒದಗಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜು, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಎಎಸ್ಪಿ ಲಾವಣ್ಯ, ಮಂಡ್ಯ ಉಪವಿಭಾಗಾಧಿಕಾರಿ ರಾಜೇಶ್ ಇತರರಿದ್ದರು.

Leave a Reply

Your email address will not be published. Required fields are marked *