ಬಹುಬೆಳೆ ಪದ್ಧತಿ ಅನುಸರಿಸಿದರೆ ಲಾಭ

ಮಂಡ್ಯ: ಬೇಸಾಯದಲ್ಲಿ ಬಹುಬೆಳೆ ಪದ್ಧತಿ ಅನುಸರಿಸಿದರೆ ಆರ್ಥಿಕವಾಗಿ ಲಾಭ ಗಳಿಸಬಹುದು ಎಂದು ಗೌರವ ವನ್ಯಜೀವಿ ಪರಿಪಾಲಕ ಡಾ.ಬಿ.ಎಂ.ನಾಗಪ್ಪ ಸಲಹೆ ನೀಡಿದರು.

ತಾಲೂಕಿನ ಮೊತ್ತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಗುರುವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್), ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘ, ಆರ್ಗ್ಯಾನಿಕ್ ಮಂಡ್ಯ, ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಚಾನೆಲ್ ಸಹಯೋಗದೊಂದಿಗೆ ಆಯೋಜಿಸಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೇಸಾಯದಲ್ಲಿ ಬದಲಾವಣೆ ಅಗತ್ಯ. ಒಂದೇ ಬೆಳೆ ಹಾಕಿ ನಷ್ಟ ಅನುಭವಿಸುವ ಬದಲು ಸಮಗ್ರ ಕೃಷಿ ಪದ್ಧತಿ ಬಳಸಬೇಕು. ಅದರಲ್ಲೂ ಸಾವಯವ ಪದ್ಧತಿ ಅನುಸರಿಸಿದರೆ ಉತ್ತಮ. ಪ್ರಾರಂಭದಲ್ಲಿ ನಷ್ಟ ಎನ್ನಿಸಿದರೂ, ನಂತರದ ವರ್ಷಗಳಲ್ಲಿ ಹೆಚ್ಚಿನ ಇಳುವರಿ ಜತೆಗೆ ಆರ್ಥಿಕವಾಗಿ ಲಾಭ ಕಾಣಬಹುದು ಎಂದರು.

ಮನುಷ್ಯನ ದುರಾಸೆಗೆ ಈಗಾಗಲೇ ಪರಿಸರನ್ನು ಇಷ್ಟಬಂದಂತೆ ಬಳಸುತ್ತಿದ್ದಾನೆ. ಪರಿಣಾಮ, ಏನಾಗುತ್ತಿದೆ ಎಂಬುದಕ್ಕೆ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಅನಾಹುತವೇ ಸಾಕ್ಷಿ. ನಾವು ಉಪಯೋಗಿಸುತ್ತಿರುವ ನೀರು ಮತ್ತು ಆಹಾರ ವಿಷವಾಗಿದೆ. ಭೂ ಮಂಡಲ ಸಂಪೂರ್ಣ ವಿಷವಾಗಿ ಬದಲಾಗುತ್ತಿದೆ. ಇದರಿಂದಾಗಿ ಪ್ರಸ್ತುತ ಕಾಯಿಲೆಗಳಿಲ್ಲದ ಮನೆಯೇ ಇಲ್ಲ ಎನ್ನುವಂತಾಗಿದೆ. ಶುದ್ಧ ಆಹಾರಕ್ಕಾಗಿ ಸಾವಯವ ಪದ್ಧತಿ ಅನುಸರಿಸಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಯುವಂತೆ ಮಾಡಬೇಕಿದೆ ಎಂದರು.

ವಿಲಾಸಕ್ಕೆ ಮಾರು ಹೋಗಬೇಡಿ: ರೈತರು ವಿಲಾಸಿ ಜೀವನಕ್ಕೆ ಮಾರು ಹೋಗಬಾರದು. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಯಾರೋ ಸಮಾರಂಭಗಳಿಗೆ ಅಥವಾ ಮಕ್ಕಳಿಗೆ ಏನನ್ನೋ ಕೊಡಿಸುತ್ತಾರೆಂದು ನಾವು ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಮಾಡುತ್ತೇನೆಂಬುದನ್ನು ಮಾಡಬಾರದು. ನಮ್ಮ ಬಳಿ ಇರುವ ಹಣದಲ್ಲಿಯೇ ಸಂತೋಷ ಕಾಣಬೇಕು. ಈ ರೀತಿಯ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮೊತ್ತಹಳ್ಳಿ ಸಾವಯವ ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಆರ್ಗ್ಯಾನಿಕ್ ಮಂಡ್ಯದ ಸಂಯೋಜಕಿ ರಶ್ಮಿ, ಮೊತ್ತಹಳ್ಳಿ ಸಾವಯವ ಕೃಷಿಕರ ಸಹಕಾರ ಸಂಘದ ಕಾರ್ಯದರ್ಶಿ ಇಂದ್ರೇಗೌಡ, ಮಂಗಲ ಘಟಕದ ಅಧ್ಯಕ್ಷ ಸುರೇಶ್, ಕಾರಸವಾಡಿ ಘಟಕದ ಅಧ್ಯಕ್ಷ ಮಾದೇಗೌಡ ಇತರರಿದ್ದರು.