ಬೆತ್ತಲೆ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ

ಮಂಡ್ಯ: ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.


ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಆರೋಪಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.


ದೇಶದಲ್ಲಿ ಜಾತಿ ಮತ್ತು ಅಸ್ಪಶ್ಯತೆ ವ್ಯವಸ್ಥೆ ತೊಲಗಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ಒದಗಿಸಿದ್ದಾರೆ. ಆದರೆ, ಕೆಲವು ಕುತಂತ್ರಿಗಳು ಹಿಂದುವಾದದ ಹಿನ್ನೆಲೆಯಲ್ಲಿ ಜಾತೀಯತೆ ಹಾಗೂ ಅಸ್ಪಶ್ಯತೆ ಆಚರಣೆ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಅಮಾನವೀಯ ಪ್ರಕರಣ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಬೇಕು. ಒಂದು ವೇಳೆ ಕಂಡುಬಂದರೆ ಅದಕ್ಕೆ ಆಯಾಯ ಜಿಲ್ಲಾಧಿಕಾರಿಯನ್ನು ಹೊಣೆಗಾರಿಕೆ ಮಾಡಬೇಕು. ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆಯ ಪರಿಷ್ಕೃತ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಪ್ರತಾಪ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಕೃಷ್ಣಪ್ಪ ಮನವಿ ಸ್ವೀಕರಿಸಿದರು.


ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಚಾಲಕರಾದ ಹರಿಕುಮಾರ್, ಎಂ.ಎಚ್.ಗೀತಾ, ಎಸ್.ಉಮೇಶ್, ಹನುಮಂತು, ಹೊಳಲು ರಾಜು, ರಾಜೇಶ್, ಶಿವು, ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಇತರರಿದ್ದರು.

Leave a Reply

Your email address will not be published. Required fields are marked *