ನಿರಂತರ ಅಭ್ಯಾಸದಿಂದ ಸಾಧನೆ

ಮಂಡ್ಯ: ನಮ್ಮ ಸುತ್ತಲಿನ ವಿಚಾರ ಕುರಿತು ಆಳವಾದ ಅಧ್ಯಯನ ಹಾಗೂ ಆತ್ಮಸ್ಥೈರ್ಯದಿಂದ ನಿರಂತರ ಅಭ್ಯಾಸ ಮಾಡಿದ್ದಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನಾಗರಿಕ ಸೇವೆ ಹುದ್ದೆ ಪಡೆಯಬಹುದು ಎಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ಸಲಹೆ ನೀಡಿದರು.

ನಗರದ ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿ ವರ್ಷ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸುಮಾರು 20 ಲಕ್ಷ ಅರ್ಜಿ ಸಲ್ಲಿಕೆಯಾಗುತ್ತವೆ. ಅದರಲ್ಲಿ 5 ಲಕ್ಷದಷ್ಟು ಜನರು ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಈ ಪೈಕಿ ಸುಮಾರು ಒಂದು ಸಾವಿರ ಜನರು ಸಂದರ್ಶನಕ್ಕೆ ಆಯ್ಕೆಯಾಗಿ, ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲಿ ಸಾಮಾನ್ಯವಾಗಿ ಕೆಲವರು ಮಾತ್ರ ಹುದ್ದೆ ಪಡೆಯುತ್ತಾರೆ ಎಂದರೆ, ಆ ವ್ಯಕ್ತಿಗಳಲ್ಲಿ ನಾವು ಒಬ್ಬರಾಗಿರಬೇಕು ಎಂದರು.

ಪದವಿ ಪಡೆದ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕ್ಷರ ಜ್ಞಾನ ಹೊಂದಿರುತ್ತಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬೇಕಾದ ಜ್ಞಾನವನ್ನು ಶೇ.10ರಷ್ಟು ಜನ ಮಾತ್ರ ಹೊಂದಿದ್ದಾರೆ. ನಮ್ಮ ದೇಶದಲ್ಲಿ ಯಾವುದೇ ವ್ಯಕ್ತಿ ಏಳನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರೆ ಅವರನ್ನು ಸಾಕ್ಷರಸ್ಥ ಎಂದು ಪರಿಗಣಿಸುತ್ತಾರೆ. ಅಕ್ಷರಸ್ಥರು ಹಾಗೂ ವಿದ್ಯಾವಂತರಿಗೆ ಸಾಕಷ್ಟು ವ್ಯತ್ಯಾಸವಿದ್ದು, ಶೇ.50 ರಷ್ಟು ಯುವಜನರ ಪದವಿ ಅಕ್ಷರಸ್ಥರಾಗಲು ಸೀಮಿತವಾಗಿದೆ. ಆದರೆ, ನಾಗರಿಕ ಸೇವಾ ಹುದ್ದೆ ಪಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವ ವಿದ್ಯಾವಂತರಾಗಿಲ್ಲ. ಹೀಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಆಳವಾದ ಜ್ಞಾನ ಗಳಿಸುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ದೇಶದಲ್ಲಿ 30 ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಪದವಿ ಪೂರ್ವದಲ್ಲಿಯೇ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವುದು ನೋಡಿದರೆ ಸಂತಸವಾಗುತ್ತದೆ. ಶೇ.60ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪದವಿ ಪೂರ್ವ ಹಂತದಲ್ಲಿ ನಿರ್ಲಕ್ಷೃ ಮಾಡಿದ ಸಾಮಾಜಿಕ ಪಾಠ ಹಾಗೂ ಕನ್ನಡ ವಿಷಯದ ಮೇಲೆ ಐಎಎಸ್ ಉತ್ತೀರ್ಣರಾಗುತ್ತಿದ್ದಾರೆ. ಜತೆಗೆ ಮಹಿಳೆಯರು ಕೂಡ ಈ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತಿರುವುದು ದೇಶದ ಸಮಾನತೆಗೆ ಅವಕಾಶ ಲಭ್ಯವಾಗುತ್ತಿರುವ ಮುನ್ಸೂಚನೆ ಎಂದರು.

ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಡಾ.ರಾಮಲಿಂಗಯ್ಯ, ಜಂಟಿ ಕಾರ್ಯದರ್ಶಿ ಎ.ಎಂ.ಅಣ್ಣಯ್ಯ, ವ್ಯವಸ್ಥಾಪಕ ಲಕ್ಷ್ಮಣ್, ಮುಖಂಡರಾದ ಅಲ್ತಾಫ್, ಲೋಕೇಶ್ ಇತರರಿದ್ದರು.

ಸರಿಯಾದ ಕಾಲಘಟ್ಟದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳದಿದ್ದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಸೂಕ್ತ ನಿರ್ಧಾರ ಮಾಡಬೇಕು. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯ ಪುಸ್ತಕಗಳ ಅಭ್ಯಾಸದೊಂದಿಗೆ ಗುರಿಯನ್ನು ಸುಲಭವಾಗಿ ತಲುಪಬಹುದು.
ಕೆ.ಯಾಲಕ್ಕಿಗೌಡ, ಜಿಪಂ ಸಿಇಒ

 

Leave a Reply

Your email address will not be published. Required fields are marked *