ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾಡಳಿತ ಸಜ್ಜುಗೊಂಡಿದ್ದು, ಆ.10ರಿಂದ ನಾಮಪತ್ರ ಸ್ವೀಕಾರ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.
ಮಂಡ್ಯ ನಗರಸಭೆ, ಮದ್ದೂರು ಮತ್ತು ಪಾಂಡವಪುರ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದಿನಿಂದ ನಾಮಪತ್ರ ಸ್ವೀಕಾರ
ರಾಜ್ಯ ಚುನಾವಣಾ ಆಯೋಗ ಆ.2ರಂದು ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆ.10ರಿಂದ ಜಿಲ್ಲೆಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಆ.17ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅಂತೆಯೇ, 12ರಂದು ಭಾನುವಾರದ ರಜಾದಿನ ಮತ್ತು 15ರಂದು ಸ್ವಾತಂತ್ರೊೃೀತ್ಸವ ಇರುವುದರಿಂದ ಈ ಎರಡು ದಿನ ನಾಮಪತ್ರ ಸ್ವೀಕಾರ ಇರುವುದಿಲ್ಲ. 18ಕ್ಕೆ ಉಮೇದುವಾರಿಕೆ ಪರಿಶೀಲನೆ, 20ಕ್ಕೆ ವಾಪಸ್ ಪಡೆದುಕೊಳ್ಳಲು ಕೊನೆಯ ದಿನವಾಗಿದೆ ಎಂದರು.
ಆ.29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯಕತೆ ಇದ್ದಲ್ಲಿ 31ಕ್ಕೆ ಮಾಡಲಾಗುವುದು. ಸೆ.1ರಂದು ಆಯಾಯ ತಾಲೂಕು ಕೇಂದ್ರದಲ್ಲಿ ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
117 ವಾರ್ಡ್, 204 ಮತಗಟ್ಟೆ
ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಿಂದ 117 ವಾರ್ಡ್‌ಗಳಿದ್ದು, 204 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಮಂಡ್ಯ ನಗರಸಭಾ ವ್ಯಾಪ್ತಿಯಲ್ಲಿ 35 ವಾರ್ಡ್, 119 ಮತಗಟ್ಟೆ, ಮದ್ದೂರು ಪುರಸಭೆ 23 ವಾರ್ಡ್, 23+3 ಮತಗಟ್ಟೆ, ಪಾಂಡವಪುರ ಪುರಸಭೆ 23 ವಾರ್ಡ್, 23 ಮತಗಟ್ಟೆ, ನಾಗಮಂಗಲ ಪುರಸಭೆ 23 ವಾರ್ಡ್, 23 ಮತಗಟ್ಟೆ, ಬೆಳ್ಳೂರು ಪಟ್ಟಣ ಪಂಚಾಯಿತಿ 13 ವಾರ್ಡ್, 13 ಮತಗಟ್ಟೆ ತೆರೆಯಲಾಗುವುದು ಎಂದರು.
ಮಂಡ್ಯದಲ್ಲಿ 14 ಅತಿಸೂಕ್ಷ್ಮ, 21 ಸೂಕ್ಷ್ಮ, 84 ಸಾಮಾನ್ಯ ಮತಗಟ್ಟೆ, ಮದ್ದೂರಿನಲ್ಲಿ 8 ಅತಿಸೂಕ್ಷ್ಮ, 18 ಸೂಕ್ಷ್ಮ ಮತಗಟ್ಟೆ, ಪಾಂಡವಪುರ 5 ಅತಿಸೂಕ್ಷ್ಮ, 8 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆ, ನಾಗಮಂಗಲ 8 ಅತಿಸೂಕ್ಷ್ಮ, 13 ಸೂಕ್ಷ್ಮ, 2 ಸಾಮಾನ್ಯ, ಬೆಳ್ಳೂರು ಪ.ಪಂ 6 ಅತಿಸೂಕ್ಷ್ಮ, 7 ಸೂಕ್ಷ್ಮ ಮತಗಟ್ಟೆ ತೆರೆಯಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ವಿಜಯ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಇದ್ದರು.
ಅಭ್ಯರ್ಥಿಗಳ ಗಮನಕ್ಕೆ
ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ನಾಮಪತ್ರವನ್ನು ಪತ್ರ-2ರಲ್ಲಿ ನೀಡಬೇಕು. ಅಭ್ಯರ್ಥಿ ಜತೆಗೆ ಸೂಚಕರ ಫೋಟೋ ಇರಬೇಕು. ಸ್ಪರ್ಧಿಸುವ ಅಭ್ಯರ್ಥಿ ಆ ನಗರ ಸ್ಥಳೀಯ ಸಂಸ್ಥೆಯ ಮತದಾರನಾಗಿರಬೇಕು. ಸೂಚಕರು ಸಂಬಂಧಿಸಿದ ವಾರ್ಡಿನ ಮತದಾರರಾಗಿರಬೇಕು. ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿ ಕಚೇರಿ ಬಳಿ 100 ಮೀ. ವ್ಯಾಪ್ತಿಯೊಳಗೆ 5 ಜನರು ಮತ್ತು ಎರಡು ವಾಹನಕ್ಕೆ ಮಾತ್ರ ಪ್ರವೇಶವಿರುತ್ತದೆ.
ಒಂದು ವಾರ್ಡ್‌ನಿಂದ ಗರಿಷ್ಠ ನಾಲ್ಕು ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅಂತೆಯೇ, ಮೀಸಲು ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಅಧಿಕೃತ ಮೂಲ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಪ್ರಮಾಣ ಪತ್ರದಲ್ಲಿ ಅಪೂರ್ಣ ಅಥವಾ ತಪ್ಪು ಮಾಹಿತಿ ನೀಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು. ನಗರಸಭೆ ಮಾನ್ಯತೆ ಪಡೆದ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ಒಬ್ಬರು ಸೂಚಕರು, ಪಕ್ಷೇತರ ಅಭ್ಯರ್ಥಿ ಐವರು ಸೂಚಕರು, ಪುರಸಭೆಗೆ ಒಂದು ಮತ್ತು ನಾಲ್ಕು, ಪಟ್ಟಣ ಪಂಚಾಯಿತಿಗೆ ಒಂದು ಮತ್ತು ಮೂರು ಸೂಚಕರ ಸಹಿ ಇರಬೇಕು. ನಾಮಪತ್ರ ಸಲ್ಲಿಸುತ್ತಿರುವ ವ್ಯಕ್ತಿ ಬೇರೆ ವಾರ್ಡಿನ ಮತದಾರರಾಗಿದ್ದಲ್ಲಿ ನಾಮಪತ್ರದ ಜತೆ ತಹಸೀಲ್ದಾರ್‌ರಿಂದ ದೃಢೀಕೃತ ಪತ್ರ ನೀಡಬೇಕು.
ಚುನಾವಣಾ ವೆಚ್ಚಕ್ಕೆ ಮಿತಿ
ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗೆ 2 ಲಕ್ಷ ರೂ., ಪುರಸಭೆಗೆ 1.50 ಲಕ್ಷ ರೂ., ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂ. ಚುನಾವಣಾ ವೆಚ್ಚದ ಮಿತಿ ನಿಗದಿಗೊಳಿಸಲಾಗಿದೆ. ಅಂತೆಯೇ, ಚುನಾವಣಾ ಆಯೋಗದಿಂದ ಮಂಡ್ಯ ನಗರಸಭೆ, ಮದ್ದೂರು ಮತ್ತು ಪಾಂಡವಪುರ, ನಾಗಮಂಗಲ ಪುರಸಭೆಗೆ ಪಿ.ವಸಂತ್‌ಕುಮಾರ್ ಅವರನ್ನು ವಿಶೇಷ ಚುನಾವಣಾ ವೀಕ್ಷಕರನ್ನಾಗಿ, ಬೆಳ್ಳೂರು ಪ.ಪಂ.ಗೆ ಎನ್.ರಮ್ಯಾ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿದೆ ಎಂದರು.
ಮಂಡ್ಯ ನಗರಸಭೆ, ಮದ್ದೂರು ಪುರಸಭೆಗೆ ಜಿ.ಎಸ್.ಸುಬ್ಬರಾಮಯ್ಯ ಮತ್ತು ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪ.ಪಂಗೆ ಖಾದರ್‌ರನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಜಿಲ್ಲಾಡಳಿತದಿಂದಲೂ ಸ್ಥಳೀಯ ಸಂಸ್ಥೆವಾರು ಲೆಕ್ಕ ಪರಿಶೋಧನಾ ತಂಡ ರಚಿಸಲಾಗಿದೆ ಎಂದರು.
ಈಗಾಗಲೇ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದ್ದು, ಎರಡು ಸುತ್ತಿನ ತರಬೇತಿ ನೀಡಲಾಗಿದೆ. ನೀತಿ ಸಂಹಿತೆ ಪಾಲಿಸಲು ಎಂಸಿಸಿ ತಂಡ ನೇಮಿಸಲಾಗಿದೆ. ಚುನಾವಣಾ ಮೇಲುಸ್ತುವಾರಿಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಮೊದಲ ಬಾರಿಗೆ ಭಾವಚಿತ್ರ
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲಾಗುತ್ತಿದೆ. ನೋಟಾ ಕೂಡ ಇರಲಿದೆ. ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಪೋಲಿಂಗ್ ಅಧಿಕಾರಿ ನೇಮಿಸಲಾಗುವುದು ಎಂದರು.
ಮಂಡ್ಯ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ), ಮದ್ದೂರು ಎಚ್.ಕೆ.ವೀರಣ್ಣಗೌಡ ಕಾಲೇಜು, ಪಾಂಡವಪುರ ಸರ್ಕಾರಿ ಪ.ಪೂ ಕಾಲೇಜು, ನಾಗಮಂಗಲ ಸರ್ಕಾರಿ ಪ.ಪೂ ಕಾಲೇಜು, ಬೆಳ್ಳೂರು ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ನಡೆಯಲಿದೆ ಎಂದರು.