ಕೆಆರ್‌ಎಸ್‌ನಿಂದ ನದಿಗೆ 44 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕೃಷ್ಣರಾಜಸಾಗರ: ಕೊಡಗು ಜಿಲ್ಲೆಯಲ್ಲಿ ಎರಡು ದಿನದಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೆ.ಆರ್.ಸಾಗರ ಅಣೆಕಟ್ಟೆಗೆ 24 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ +103 ಮಟ್ಟದ 18 ಗೇಟ್‌ಗಳ ಮೂಲಕ ನದಿಗೆ 43,809 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಬುಧವಾರ ಸಂಜೆ 6284 ಕ್ಯೂಸೆಕ್ ಇದ್ದ ಒಳಹರಿವು ಗುರುವಾರ ಬೆಳಗ್ಗೆ 12710 ಕ್ಯೂಸೆಕ್‌ಗೆ ಏರಿತ್ತು. ಮಧ್ಯಾಹ್ನದ ವೇಳೆಗೆ 29,163 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದೆ.
ಜು.20ರಂದು ಜಲಾಶಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾವೇರಿಗೆ ಬಾಗಿನ ಅರ್ಪಿಸಿದ್ದು, ಅಂದು ಅಣೆಕಟ್ಟೆ ಗರಿಷ್ಠ ಮಟ್ಟ 124.80 ಅಡಿ ತಲುಪಿತ್ತು. ನಂತರ ದಿನಗಳಲ್ಲಿ ಅಣೆಕಟ್ಟೆಯಿಂದ 85 ಸಾವಿರ ಕ್ಯೂಸೆಕ್‌ತನಕ ನೀರನ್ನು ನದಿಗೆ ಹರಿಸಲಾಗಿತ್ತು.
ಬುಧವಾರ ಮಧ್ಯಾಹ್ನ 124.50 ಅಡಿ ನೀರಿನ ಮಟ್ಟ ಇದ್ದ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ 43,809 ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಪ್ರಸ್ತುತ 48.900 ಟಿಎಂಸಿ ನೀರಿನ ಸಂಗ್ರಹ ಇದೆ.
ಕಳೆದ ವರ್ಷ ಇದೇ ದಿನ ಅಣೆಕಟ್ಟೆ ನೀರಿನ ಮಟ್ಟ 92.85 ಅಡಿ, ಒಳಹರಿವು 8419 ಕ್ಯೂಸೆಕ್, ಹೊರಹರಿವು 6113 ಕ್ಯೂಸೆಕ್, 17.118 ಟಿಎಂಸಿ ನೀರಿನ ಸಂಗ್ರಹ ಇತ್ತು.
ದೋಣಿ ವಿಹಾರ ಸ್ಥಗಿತ: ಅಣೆಕಟ್ಟೆಯಿಂದ ನದಿಗೆ 43,809 ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ದೋಣಿ ವಿಹಾರ ಕೇಂದ್ರದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ದೋಣಿ ವಿಹಾರವನ್ನು ಮಧ್ಯಾಹ್ನದಿಂದ ಸ್ಥಗಿತಗೊಳಿಸಲಾಗಿದೆ.ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯ ಹಿರಿಯ ಅಧಿಕಾರಿಗಳ ಸಲಹೆಯಂತೆ ನಿರ್ದಿಷ್ಟ ಮಟ್ಟದಲ್ಲಿ ನೀರಿನ ಸಂಗ್ರಹ ಇರಿಸಿಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಒಳಹರಿವು ಹೆಚ್ಚಾದಂತೆ ಅಣೆಕಟ್ಟೆಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತದೆ. ಹಾಗಾಗಿ ನದಿಗೆ ಯಾರೂ ಇಳಿಯಬಾರದು.
ಬಸವರಾಜೇಗೌಡ ಕಾರ್ಯಪಾಲಕ ಇಂಜಿನಿಯರ್, ಕೆ.ಆರ್.ಸಾಗರಕೆಆರ್‌ಎಸ್ ಬೃಂದಾವನಕ್ಕೆ ಎಸ್ಪಿ ಭೇಟಿ, ಭದ್ರತೆ ಪರಿಶೀಲನೆ
ಕೆ.ಆರ್.ಸಾಗರ ಅಣೆಕಟ್ಟೆ ಮತ್ತು ಬೃಂದಾವನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿವಪ್ರಕಾಶ್ ಭೇಟಿ ನೀಡಿ ಭದ್ರತೆ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಪಾಂಡವಪುರ ತಾಲೂಕು ಸೀತಾಪುರ ಗ್ರಾಮದಲ್ಲಿ ಭತ್ತದ ನಾಟಿ ಕಾರ್ಯಕ್ರಮದಲ್ಲಿ ಆ.11ರಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿ ನಂತರ ಕೆ.ಆರ್.ಸಾಗರಕ್ಕೆ ಬರುವ ಹಿನ್ನೆಲೆಯಲ್ಲಿ ಬೃಂದಾವನದ ಭದ್ರತೆ ಕುರಿತು ಪರಿಶೀಲನೆ ನಡೆಸಿದರು.
ಡಿವೈಎಸ್ಪಿ ವಿಶ್ವನಾಥ್, ವೃತ್ತ ನಿರೀಕ್ಷಕ ರವೀಂದ್ರ, ಪಿಎಸೈ ಬ್ಯಾಟರಾಯಗೌಡ, ಪುನೀತ್, ಕೆ.ಆರ್.ಸಾಗರ ಅಣೆಕಟ್ಟೆ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಪಿಎಸೈಗಳಾದ ಪ್ರಮೋದ್, ಸೊಹಿಲ್ ಅಹಮದ್, ಗೋವರ್ಧನ್ ಇದ್ದರು.