ದೇವರ ಪೂಜೆಗಿಂತ ದೇಶಪೂಜೆ ದೊಡ್ಡದು

ಚಿಕ್ಕಮಗಳೂರು: ದೇಶ ಉಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯ ಉಳಿಯುತ್ತದೆ. ಪ್ರಜಾಪ್ರಭುತ್ವದ ಉಳಿವು ಯುವಜನತೆಯ ಕೈಯಲ್ಲಿದೆ, ಎಲ್ಲಿಯವರೆಗೆ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡುವುದಿಲ್ಲವೊ ಅಲ್ಲಿಯವರೆಗೂ ರಾಷ್ಟ್ರ ಮುಂದುವರಿಯಲು ಸಾಧ್ಯವಿಲ್ಲ ಎಂದು ಮತದಾನ ಜಾಗೃತಿ ಜಿಲ್ಲಾ ರಾಯಬಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ ಹಾಗೂ ಪತ್ರಿಕೋದ್ಯಮ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಯುವಜನ ಕಡ್ಡಾಯವಾಗಿ ಮತದಾನದಲ್ಲಿ ಭಾಗಿಯಾಗಲೇಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳಿಸಲು ಯೋಗ್ಯರು ಜನ ಪ್ರತಿನಿಧಿಯಾಗಿ ಆಯ್ಕೆಯಾಗಬೇಕಿದ್ದು, ಇದರಲ್ಲಿ ಯುವಜನತೆ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ಮತ ಎಂದರೆ ಜಾತಿಯಲ್ಲ, ಅದು ಅಭಿಪ್ರಾಯ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮತದಾನ ನಮ್ಮ ಧರ್ಮವಾಗಬೇಕು. ಹಣಕ್ಕೆ ನಮ್ಮ ವ್ಯಕ್ತಿತ್ವ ಮಾರಿಕೊಳ್ಳಬಾರದು, ಯಾವುದೆ ಆಮಿಷಕ್ಕೂ ಒಳಗಾಗದೆ ಮತದಾನ ಮಾಡಬೇಕು. ನಮ್ಮನ್ನು ಸಾಕಿ ಸಲಹುತ್ತಿರುವ ಭಾರತ ಮಾತೆಗೆ ನಾವು ನೀಡಬಹುದಾದ ಅತ್ಯಮೂಲ್ಯ ದಾನವೆಂದರೆ ಅದು ಮತದಾನ ಎಂದು ಕಿವಿಮಾತು ಹೇಳಿದರು.

ಕೊನೇ ಕ್ಷಣದವರೆಗೆ ಕಾಯಬೇಡಿ: ಯವಜನತೆ ಚುನಾವಣೆಯ ದಿನ ಮತದಾನದ ಅಂತಿಮ ಘಳಿಗೆಯವರೆಗೂ ಕಾಯಬಾರದು. ಆದಷ್ಟು ಬೇಗ ಮತದಾನ ಮಾಡುವುದರ ಜತೆಗೆ ಉಳಿದವರಿಗೂ ಮತ ಹಾಕಲು ಪ್ರೇರೇಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಬಗಾದಿ ಗೌತಮ್ ಮನವಿ ಮಾಡಿದರು.