ಕಡ್ಡಾಯ ಹಕ್ಕು ಚಲಾಯಿಸಲು ಅಪ್ಪ, ಅಮ್ಮನಿಗೆ ಪತ್ರ

ಪರಿಶಿಷ್ಟ ವರ್ಗಗಳ ಹಾಸ್ಟೆಲ್, ಶಾಲೆ ವಿದ್ಯಾರ್ಥಿಗಳಿಂದ ಜಾಗೃತಿ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯ ಹಾಗೂ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ತಂದೆ, ತಾಯಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೆ ಆಯೋಗದ ಸೂಚನೆಯಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ, ಜಾಗೃತಿ ಜಾಥಾ, ವಿಶೇಷ ನೋಂದಣಿ ಅಭಿಯಾನ ನಡೆಸುತ್ತಿದೆ. ಆದರೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಂದ ವಿನೂತನವಾಗಿ ಜಾಗೃತಿ ಮೂಡಿಸಲು ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಇಲಾಖೆ ವ್ಯಾಪ್ತಿಯ 23 ವಸತಿ ನಿಲಯ, 14 ವಸತಿ ಶಾಲೆಯ ಅಂದಾಜು 4800 ವಿದ್ಯಾರ್ಥಿಗಳು ಊರಲ್ಲಿರುವ ತಂದೆ ತಾಯಿಗೆ ಪತ್ರ ಬರೆದಿದ್ದಾರೆ. ಆರಂಭದಲ್ಲಿ ಪ್ರೀತಿಯ ಅಪ್ಪ, ಅಮ್ಮ ಪ್ರಜಾಪ್ರಭುತ್ವ ನಮ್ಮಿಂದ, ಮತ ಚಲಾಯಿಸೋಣ ಹೆಮ್ಮೆಯಿಂದ ಎನ್ನುವ ಶೀರ್ಷಿಕೆ ಬರೆದು ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೆ ಆಸೆ, ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ, ನಮ್ಮ ಉಜ್ವಲ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಮತ ಚಲಾಯಿಸಿ’ ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಶನಿವಾರ ನಗರದ ಮುಖ್ಯ ಅಂಚೆ ಕಚೇರಿ ಅಧಿಕಾರಿಗೆ ವಿದ್ಯಾರ್ಥಿಗಳು ಪತ್ರಗಳನ್ನು ಹಸ್ತಾಂತರಿಸಿದರು. ಈ ವೇಳೆ ಇಲಾಖೆ ಅಧಿಕಾರಿ ನವೀನ್, ರಾಜೇಂದ್ರ ಜಲ್ದಾರ್ ಇತರರಿದ್ದರು.