ನೆಲಮಂಗಲ: ವೀರಶೈವ ಲಿಂಗಾಯತ ಧರ್ಮ ಮಾನವರನ್ನು ದೇವರಾಗಿಸಿದ ಜಗತ್ತಿನ ಏಕೈಕ ಧರ್ಮವಾಗಿದೆ ಎಂದು ಚಿಕ್ಕತೊಟ್ಲು ಕೆರೆ ಮಠದ ಶ್ರೀ ಅಟವೀಶಿವಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಕವಾಡಿಮಠದಲ್ಲಿ ನೂತನ ಶ್ರೀ ರುದ್ರೇಶ್ವರ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಧ್ವಜಾರೋಹಣ ಹಾಗೂ ಶರಣ ಸಮ್ಮೇಳನದಲ್ಲಿ ಮಾತನಾಡಿದರು.
ವಿಶ್ವದಲ್ಲಿ ಅನೇಕ ಆವಿಷ್ಕಾರ ಮಾಡಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಭಾರತೀಯರು ನಿಸರ್ಗವನ್ನೇ ದೈವಿಶಕ್ತಿಯೆಂದು ಪೂಜಿಸುತ್ತಾರೆ. ಅದಕ್ಕೂ ಮೀರಿ ಮನುಷ್ಯನ ದೇಹವೇ ದೇವಾಲಯ, ಆತ್ಮವೇ ದೇವರೆಂದು ಭಾವಿಸಿರುವ ವೀರಶೈವಲಿಂಗಾಯತರು ದೇವರ ಆರಾಧನೆಯಿಂದ ಆತ್ಮೋದ್ಧಾರ ಮಾಡಿಕೊಂಡಿದ್ದು ಜೀವನದಲ್ಲಿ ನೆಮ್ಮದಿ ಸುಖವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯವನ್ನೇ ಜ್ಯೋರ್ತಿಲಿಂಗವಾಗಿ ಮಾಡಿದ ಕೀರ್ತಿ ಬಸವಾದಿಶರಣರಿಗೆ ಸಲ್ಲುತ್ತದೆ. ಭಕ್ತರ ಮನೆಗಳು ದಾಸೋಹ ಕ್ಷೇತ್ರಗಳಾಗಿ ಪರಿವರ್ತಿತವಾಗಿವೆ. ಗುರು,ಲಿಂಗ ಜಂಗಮ ಆರಾಧನೆಯನ್ನೇ ಉಸಿರಾಗಿಸಿಕೊಂಡಿರುವ ಜನರು ದೇವಾಲಯದ ಜೀರ್ಣೋದ್ಧಾರದ ಹೆಸರಿನಲ್ಲಿ ಶರಣ ಸಮ್ಮೇಳನ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಮಹಂತಿನಮಠದ ಶ್ರೀ ಷ.ಬ್ರ.ರೇಣುಕಾಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವಲಿಂಗಾಯತ ಸನಾತನ ಧರ್ಮವಾಗಿದೆ. ಎಲ್ಲರೂ ಪರಮಾತ್ಮನ ಅನುಗ್ರಹದಲ್ಲಿ ಬದುಕಿಬೇಕಿದೆ. ಶಿವಶರಣರ ತತ್ವ ಸಿದ್ಧಾಂತದಿಂದ ಮನುಕುಲದ ಉದ್ಧಾರವಾಗುತ್ತಿದೆ. ಬಸವಾದಿಶರಣರ ವಚನ ಸಿದ್ಧಾಂತದಿಂದ ಜೀವನ ಸಾರ್ಥಕ ಪಡಿಸಿಕೊಳ್ಳಬಹುದಾಗಿದೆ ಎಂದರು.
ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬೃಹತ್ ಸುಂದರ ದೇವಾಲಯ ನಿರ್ಮಾಣ ಮಾಡಿರುವ ಕಾರ್ಯ ಪ್ರಶಂಸನೀಯ. ಸಮಾಜದಲ್ಲಿರುವ ಆಂತರಿಕ ಸಮಸ್ಯೆ ಸರಿಪಡಿಸಿಕೊಂಡು ಹೊಂದಾಣಿಕೆ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದರು.
ಮಾಗಡಿ ತಾಲೂಕು ಗದ್ದುಗೆಮಠದ ಶ್ರೀ ಮಹಂತಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಕಂಚುಗಲ್ ಬಂಡೆ ಮಠದ ಶ್ರೀ ಬಸವಲಿಂಗಸ್ವಾಮೀಜಿ, ಹಲಗೂರು ಬೃಹನ್ಮಠದ ಶ್ರೀ ಷ.ಬ್ರ.ರುದ್ರಮುನಿಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಹೊನ್ನಮ್ಮಗವಿಮಠದ ಶ್ರೀ .ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಧ್ವಜಾರೋಹಣ: ದೇವಾಲಯದ ಉದ್ಘಾಟನೆ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣವನ್ನು ತುಮಕೂರು ಸಿದ್ಧಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೆರವೇರಿಸಿದರು. ಕಂಬಾಳು ಮಠದ ಶ್ರೀ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ಸಮುದಾಯ ಮುಖಂಡರನ್ನು ಗೌರವಿಸಲಾಯಿತು.
ಬಿಜೆಪಿ ರಾಜ್ಯಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು, ಬಮುಲ್ ನಿರ್ದೇಶಕ ಜಿ.ಭಾಸ್ಕರ್ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಮಾಜಿ ಶಾಸಕ ಎಂ.ವಿ.ನಾಗರಾಜು ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ಪುರಸಭೆ ಸದಸ್ಯ ಸಿ.ಪ್ರದೀಪ್, ಸುಧಾಕೃಷ್ಣಪ್ಪ, ಎನ್.ಎನ್.ಪೂರ್ಣಿಮಾ ಸುಗ್ಗರಾಜು, ವೀರಶೈವಮಹಾಸಭಾ ತಾಲೂಕು ಅಧ್ಯಕ್ಷ ಎನ್.ಎಸ್.ಶಾಂತಕುಮಾರ್, ಕಾರ್ಯಾಧ್ಯಕ್ಷ ರೇವಣಸಿದ್ದಯ್ಯ, ಖಜಾಂಚಿ ಸಿ.ಸತೀಶ್‌ಕುಮಾರ್, ನಿರ್ದೇಶಕ ಎಂ.ಜಿ.ಲೋಕೇಶ್, ದೇವಾಲಯ ಸಮಿತಿ ಗೌರವಾಧ್ಯಕ್ಷ ಎನ್.ಎಸ್.ನಟರಾಜು, ಅಧ್ಯಕ್ಷ ಎನ್.ಆರ್.ಜಗದೀಶ್, ಖಜಾಂಚಿ ಎನ್.ಬಿ.ದಯಾಶಂಕರ್, ಕಾರ್ಯದರ್ಶಿ ಎನ್.ಗಂಗರಾಜು, ಗೌರವ ಕಾರ್ಯದರ್ಶಿ ಎನ್.ಜಿ.ರುದ್ರಮೂರ್ತಿ, ಕಾನೂನು ಸಲಹೆಗಾರ ವಕೀಲ ಎನ್.ಎಸ್.ರಾಜು, ಸಹಕಾರ್ಯದರ್ಶಿ ಪುಟ್ಟಣ್ಣ, ಸದಸ್ಯರಾದ ಮಹೇಶ್, ಯತೀಶ್ ಉಪಸ್ಥಿತರಿದ್ದರು.