ಸಂಸ್ಕೃತಿ ಮೇಲೆ ಹಿಂದುವಾದದ ದಾಳಿ

ಚಿಕ್ಕಮಗಳೂರು: ಭಾರತ ಪ್ರಮುಖ ಶತ್ರುಗಳಾಗಿರುವ ಬಂಡವಾಳಶಾಹಿ ಮತ್ತು ವೈದಿಕ ವಾದದ ಮೂಲಕ ಬಿಕ್ಕಟ್ಟು ಹುಟ್ಟುಹಾಕಲಾಗುತ್ತಿದೆ ಎಂದು ಜನಪರ ಚಿಂತಕ ಆರ್. ಮಾನಸಯ್ಯ ಹೇಳಿದರು.

ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಜನಪರ ಸಾಹಿತ್ಯ ಸಮ್ಮೇಳನ-2019ರ ಎರಡನೇ ದಿನ ಮಂಗಳವಾರ ವಿಚಾರ ಗೋಷ್ಠಿಯಲ್ಲಿ ‘ಸಾಂಸ್ಕೃತಿಕ ಕ್ಷೇತ್ರದ ಬಿಕ್ಕಟ್ಟು ಹಾಗೂ ಪರಿಹಾರ’ ಕುರಿತು ಮಾತನಾಡಿದರು.

ಬಂಡವಾಳ ಮತ್ತು ವೈದಿಕವಾದ ಇವು ಎಂದಿಗೂ ಜಾತಿ ನಾಶ ಮಾಡುವುದಿಲ್ಲ. ಇವುಗಳ ಮೂಲಕ ತಮ ವಿಚಾರಧಾರೆಗಳನ್ನು ಬಹುಸಂಖ್ಯಾತರ ಮೇಲೆ ಗೊತ್ತಿಲ್ಲದಂತೆ ಹೇರಲಾಗುತ್ತಿದೆ. ಹಿಂದುವಾದಿಗಳು ಬಂಡವಾಳಶಾಹಿಗಳ ಜತೆ ಇದ್ದಾರೆಯೇ ಹೊರತು ಬಡವರ ಪರವಾಗಿಲ್ಲ ಎಂದರು.

ಹಿಂದು, ವೈದಿಕ ಜ್ಞಾನ ಶಾಖೆ ಪ್ರಬಲವಾಗಿ ಬೆಳೆದು ಸಂಸ್ಕೃತಿ ಜತೆ ವಿಜ್ಞಾನದ ಮೇಲೂ ದಾಳಿ ಮಾಡುತ್ತಿದೆ. ಸಂಪತ್ತಿಗಾಗಿ ಧರ್ಮದ ಬೆನ್ನು ಬೀಳಲಾಗಿದೆ. ಈಗ ಅಂತಾರಾಷ್ಟ್ರ ಬಂಡವಾಳ ಕೃಷಿ ಮತ್ತು ಕೈಗಾರಿಕೆ ಮೂಲಕ ದೇಶದ ಸಾಂಸ್ಕೃತಿಕ ಜಗತ್ತನ್ನು ನಿಯಂತ್ರಿಸುತ್ತಿದೆ. ಇದರ ಜತೆ ವಸ್ತ್ರ ಸಂಹಿತೆಯನ್ನು ಒತ್ತಾಯಪೂರ್ವಕವಾಗಿ ಹಿಡಿತಕ್ಕೆ ತೆಗೆದುಕೊಳ್ಳಲಾಗುತ್ತಿದೆ. ವಸ್ತ್ರ, ಆಹಾರ, ಸಂಸ್ಕೃತಿ ಮೇಲಿನ ದಾಳಿಗೆ ಪ್ರತಿರೋಧ ವ್ಯಕ್ತವಾಗಲೇಬೇಕು ಎಂದರು.