ಕಾಶ್ಮೀರ ವಿವಾದ ರಾಜಕೀಯ ಸಮಸ್ಯೆ, ರಾಜಕೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದ ಮೆಹಬೂಬಾಗೆ ಗಂಭೀರ್​ ಕೊಟ್ಟ ಉತ್ತರ…

ಶ್ರೀನಗರ: ಕಾಶ್ಮೀರ ವಿವಾದದ ವಿಷಯ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತು ದೆಹಲಿಯ ನೂತನ ಸಂಸತ್​ ಸದಸ್ಯ ಗೌತಮ್​ ಗಂಭೀರ್​ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ.
ಕಾಶ್ಮೀರ ವಿವಾದ ಒಂದು ರಾಜಕೀಯ ಸಮಸ್ಯೆ. ಅದನ್ನು ರಾಜಕೀಯವಾಗಿ ಬಗೆಹರಿಸಿಕೊಳ್ಳಬೇಕು. ಇದಕ್ಕಾಗಿ ಮಿಲಿಟರಿ ಬಲ ಬಳಕೆ ತಪ್ಪು ಎಂದು ಮೆಹಬೂಬಾ ಮುಫ್ತಿ ಟ್ವೀಟ್​ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಗೌತಮ್​ ಗಂಭೀರ್​ ಈ ವಿಷಯವಾಗಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮೆಹಬೂಬಾ ಟ್ವೀಟ್​ ಏನು?
1947ರಿಂದಲೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಕಾಶ್ಮೀರ ವಿವಾದವನ್ನು ಮಿಲಿಟರಿ ಬಲ ಬಳಸಿ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇವೆ. ಕಾಶ್ಮೀರದ ವಿವಾದ ಪರಿಹಾರ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಕೂಡ ಒಂದು ಪಕ್ಷವಾಗಿದೆ. ಹಾಗಾಗಿ ಈ ವಿವಾದವನ್ನು ಪರಿಹರಿಸಿಕೊಳ್ಳುವ ವಿಷಯದಲ್ಲಿ ಪಾಕಿಸ್ತಾವನ್ನೂ ಒಳಗೊಳಿಸಿಕೊಳ್ಳಬೇಕು. ಅದು ಬಿಟ್ಟು ಕೇಂದ್ರ ಗೃಹ ಸಚಿವ ಅಮಿತ್​ ಷಾ ಈ ಸಮಸ್ಯೆ ಪರಿಹರಿಸಿಕೊಳ್ಳಲು ಮಿಲಿಟರಿ ಬಲವನ್ನು ನಂಬಿಕೊಂಡಿದ್ದಾರೆ. ಇದು ಅವಿವೇಕದ ಪರಮಾವಧಿ ಎಂದು ಟ್ವೀಟ್​ನಲ್ಲಿ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ.

ಗಂಭೀರ್​ ಮಾಸ್ಟರ್​ ಸ್ಟ್ರೋಕ್​ ಏನು?
ಇದು ನೂತನ ಸಂಸದ ಗೌತಮ್​ ಗಂಭೀರ್​ ಅವರ ಕಣ್ಣನ್ನು ಕೆಂಪಾಗಿಸಿದೆ. ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ. ಆದರೆ ಇದು ಮೆಹಬೂಬಾ ಮುಫ್ತಿ ಅವರಿಗೆ ಅಮಿತ್​ ಷಾ ಅವರ ಅವಿವೇಕದ ನಿರ್ಧಾರ ಎಂದು ಅನಿಸುತ್ತಿರುವುದು ಬೇಸರದ ಸಂಗತಿ. ಈ ವಿಷಯದಲ್ಲಿ ನಾವೆಷ್ಟು ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸುತ್ತಿದ್ದೇವೆ ಎಂಬುದಕ್ಕೆ ಇತಿಹಾಸವೇ ಸಾಕ್ಷ್ಯ. ದಮನಕಾರಿ ನೀತಿಗಳು ನಮ್ಮ ಜನರಿಗೆ ಭದ್ರತೆ ಒದಗಿಸುತ್ತವೆ ಎಂದಾದರೆ, ನಮಗೆ ಅದುವೇ ಒಪ್ಪಿತ ಎಂದು ಟ್ವೀಟ್​ನಲ್ಲಿ ಮೆಹಬೂಬಾ ಮುಫ್ತಿಗೆ ಪ್ರತ್ಯುತ್ತರ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *