ಎನ್​ಡಿಆರ್​ಎಫ್​ ಸಿಬ್ಬಂದಿ ಕನ್ಹಯ್ಯ ಹೀರೋ ಆಗಿದ್ದು ಹೀಗೆ…

ಇಡುಕ್ಕಿ: ಇನ್ನೇನು ಮುಳುಗಡೆಯಾಗಲಿದ್ದ ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಮಗುವನ್ನು ರಕ್ಷಿಸುವ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್​ಡಿಆರ್​ಎಫ್)​ ಪೇದೆ ಕೇರಳದ ಪಾಲಿಗೆ ಹೀರೊ ಆಗಿಬಿಟ್ಟಿದ್ದಾರೆ.

ಹೌದು, ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯಗಳಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನದಿಗಳಲ್ಲಿ ರಭಸದಿಂದ ನೀರು ಹರಿಯುತ್ತಿದೆ. ನದಿಯ ಸೇತುವೆಯೊಂದು ಇನ್ನೇನು ಮುಳುಗಡೆಯಾಗುವ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಎನ್​ಡಿಆರ್​ಎಫ್​ ಸಿಬ್ಬಂದಿ ಜೀವದ ಹಂಗು ತೊರೆದು ಸೇತುವೆಯ ಮತ್ತೊಂದು ತುದಿಯಲ್ಲಿದ್ದ ಮಗುವನ್ನು ನೋಡನೋಡುತ್ತಿದ್ದಂತೆ ಎತ್ತಿಕೊಂಡು ಬಂದು ಜೀವ ಉಳಿಸಿದ್ದಾರೆ.

ಆಗಿದ್ದೇನು?
ಸೇತುವೆ ದಾಟಲು ಭಯ ಪಟ್ಟು ಅಪ್ಪ ತನ್ನ ಮಗುವನ್ನು ಇಟ್ಟುಕೊಂಡು ಯಾರಾದರು ರಕ್ಷಣೆಗೆ ಬರುವರೇ ಎಂಬುದನ್ನೇ ಕಾದು ಕುಳಿತಿದ್ದರು. ಇದನ್ನು ಗಮನಿಸಿದ ಎನ್​ಡಿಆರ್​ಎಫ್ ಅಧಿಕಾರಿ ಕನ್ಹಯ್ಯ ಕುಮಾರ್ ಜೀವದ ಹಂಗನ್ನು ತೊರೆದು ಸೇತುವೆ ಮೇಲೆ ಓಡಿ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ವೇಗವಾಗಿ ಓಡಿ ಬಂದಿದ್ದಾರೆ. ಇವರ ಜತೆಗೆ ಮಗುವಿನ ತಂದೆ ಸಹ ಅವರನ್ನು ಹಿಂಬಾಲಿಸಿ ಓಡಿ ಬಂದಿದ್ದಾರೆ. ಒಟ್ಟಿನಲ್ಲಿ ಕನ್ಹಯ್ಯ ಕುಮಾರ್ ಅವರ ಸಮಯಪ್ರಜ್ಞೆಯಿಂದ ತಂದೆ-ಮಗಳು ಸುರಕ್ಷಿತವಾಗಿದ್ದಾರೆ. ​

ಖಾಸಗಿ ನ್ಯೂಸ್‌ ಚಾನೆಲ್‌ವೊಂದು ಚಿತ್ರೀಕರಿಸಿರುವ ಕನ್ಹಯ್ಯ ಅವರ ರಕ್ಷಣಾ ಕಾರ್ಯಾಚರಣೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಶ್ಲಾಘನೆಯ ಸುರಿಮಳೆಗೈದಿದ್ದಾರೆ.

ಕನ್ಹಯ್ಯ ಅವರು ಮಗುವನ್ನು ಸೇತುವೆಯಿಂದ ಈ ಬದಿಗೆ ಎತ್ತುಕೊಂಡು ಬಂದ ಕೆಲವೇ ನಿಮಿಷಗಳಲ್ಲಿ ಆ ಸೇತುವೆ ಮುಳುಗಡೆಯಾಗಿದೆ.

ವ್ಯಕ್ತಿ ಯಾರು ಎಂದು ಕೇಳಲೂ ಸಮಯವಿರಲಿಲ್ಲ
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕನ್ಹಯ್ಯ ಅವರು, ನಾನು ನಿಂತಿದ್ದ ಜಾಗದಲ್ಲಿ ರಾಜಕಾರಣಿಗಳು, ಸ್ಥಳೀಯರು, ಅಧಿಕಾರಿಗಳು ಇದ್ದರು. ಆದರೆ ನನಗೆ ಇದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ತಂದೆ ಮತ್ತು ಮಗುವನ್ನು ನೋಡಿದೆ. ಅವರು ಸೇತುವೆ ದಾಟಲು ಭಯ ಪಡುತ್ತಿದ್ದಾರೆ ಎಂಬುದು ತಿಳಿಯಿತು. ತಕ್ಷಣ ಓಡಿಹೋಗಿ ಮಗುವನ್ನು ಎತ್ತಿಕೊಂಡು ವಾಪಸಾದೆ. ನನ್ನ ಹಿಂದೆ ಮಗುವಿನ ತಂದೆಯೂ ಓಡಿ ಬಂದರು. ಅವರು ಯಾರು ಎಂದು ಕೇಳಲೂ ನನ್ನ ಬಳಿ ಸಮಯವಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಯಿತು ಎಂದಿದ್ದಾರೆ.

ನನಗೆ ವಿಪತ್ತು ದಳದಲ್ಲಿ ಆರು ವರ್ಷ ಅನುಭವವಿದೆ. ಈ ಆರು ವರ್ಷಗಳ ಅನುಭವದಿಂದಲೇ ಇಂದು ನಾನು ತ್ವರಿತ ನಿರ್ಧಾರ ಕೈಗೊಳ್ಳಲು ಅನುಕೂಲವಾಯಿತು ಎಂದರು.

ಎನ್‌ಡಿಆರ್‌ಎಫ್ ನ ಒಟ್ಟು 14 ತಂಡಗಳ 404 ಸಿಬ್ಬಂದಿ ಕೇರಳ ಇಡುಕ್ಕಿ, ವಯನಾಡ್, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್)