ವಿಮಾನ ನಿಲ್ದಾಣದಲ್ಲಿ ಹೊರಡಲು ಅನುವಾಗಿದ್ದ ವಿಮಾನದತ್ತ ನಡೆದು ಬಂದ: ಸಿಐಎಸ್​ಎಫ್​ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ…!

ಮುಂಬೈ: ಸ್ಪೈಸ್​ಜೆಟ್​ ಸಂಸ್ಥೆಯ ಎಸ್​ಜಿ634 ವಿಮಾನ ಮುಂಬೈನಿಂದ ಬೆಂಗಳೂರಿಗೆ ಹೊರಡಲು ಸಜ್ಜಾಗಿತ್ತು. ಟ್ಯಾಕ್ಸಿವೇ ಮೂಲಕ ಇನ್ನೇನು ಮುಖ್ಯ ರನ್​ವೇ ಅತ್ತ ತೆರಳಬೇಕು, ಅಷ್ಟರಲ್ಲಿ ವ್ಯಕ್ತಿಯೊಬ್ಬ ಆ ವಿಮಾನದತ್ತ ನಡೆದುಕೊಂಡು ಬರುತ್ತಿದ್ದದ್ದು ಕಾಣಿಸಿತು. ತಕ್ಷಣವೇ ರನ್​ವೇಗೆ ತೆರಳಿದ ಸಿಐಎಸ್​ಎಫ್​ ಸಿಬ್ಬಂದಿ, ಆ ವ್ಯಕ್ತಿಯನ್ನು ಬಂಧಿಸಿದರು.

ಗುರುವಾರ ಮಧ್ಯಾಹ್ನ 1.45ರಲ್ಲಿ ಆ ವ್ಯಕ್ತಿ ಮುಂಬೈ ವಿಮಾನ ನಿಲ್ದಾಣದ ತುರ್ತು ಪ್ರವೇಶದ್ವಾರದಿಂದ ರನ್​ವೇ ಸಂಖ್ಯೆ 27 ಪ್ರವೇಶಿಸಿ, ಸ್ಪೈಸ್​ಜೆಟ್​ ವಿಮಾನದತ್ತ ತೆರಳುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಐಎಸ್​ಎಫ್​ ಸಿಬ್ಬಂದಿ, ಬಂಧಿತ ಮುಂಬೈನ ಸಿಯಾನ್​ ನಿವಾಸಿ. ಮಾನಸಿಕವಾಗಿ ವಿಚಲಿತಗೊಂಡಿರುವವನಂತೆ ಕಾಣುತ್ತಿದ್ದಾನೆ. ವಿಮಾನ ನಿಲ್ದಾಣದ ಗೋಡೆಯನ್ನು ಹಾರಿ ಈತ ತುರ್ತು ಪ್ರವೇಶದ್ವಾರದ ಮೂಲಕ ರನ್​ವೇ ಪ್ರವೇಶಿಸಿದ್ದ. ಸದ್ಯ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವ್ಯಕ್ತಿ ವಿಮಾನದೆಡೆಗೆ ಬರುತ್ತಿರುವುದನ್ನು ಗಮನಿಸಿದ ಸ್ಪೈಸ್​ಜೆಟ್​ ವಿಮಾನದ ಪೈಲಟ್​ ತಕ್ಷಣವೇ ವಿಮಾನದ ಇಂಜಿನ್​ ಅನ್ನು ಸ್ಥಗಿತಗೊಳಿಸಿ ಸಮಯಪ್ರಜ್ಞೆ ತೋರಿದ್ದಾರೆ. ಇಲ್ಲವಾಗಿದ್ದರೆ, ಈ ವ್ಯಕ್ತಿಗೆ ಏನಾದರೂ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.

ಇದೇ ಹೇಳಿಕೆಯನ್ನು ಪುನರಾವರ್ತಿಸಿರುವ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಸೋಮವಾರ ಮತ್ತು ಗುರುವಾರದಂದು ರನ್​ವೇಗಳ ನಿರ್ವಹಣೆ ಕಾರ್ಯ ನಡೆಸಲಾಗುತ್ತದೆ. ಇದರ ಭಾಗವಾಗಿ ಗುರುವಾರ ರನ್​ವೇ ಸಂಖ್ಯೆ 27ರ ನಿರ್ವಹಣೆ ಕಾರ್ಯ ನಡೆದಿತ್ತು. ಅದರಂತೆ ವಿಮಾನದ ಹಾರಾಟವನ್ನು ಬೇರೊಂದು ರನ್​ವೇಗೆ ಸ್ಥಳಾಂತರಿಸಿ, ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹೈ ಅಲರ್ಟ್​ ಘೋಷಿಸಲಾಗಿತ್ತು. ಹೀಗಿರುವಾಗಲೇ ವ್ಯಕ್ತಿಯೊಬ್ಬ ಬಿಗಿ ಭದ್ರತೆಯ ಹಾಗೂ ಅತಿ ಸೂಕ್ಷ್ಮವಾದ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ವೇ ಪ್ರವೇಶಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಸೂಕ್ತ ತನಿಖೆಗೆ ಆಗ್ರಹ ಹೆಚ್ಚಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *