ಆಸ್ಟ್ರೇಲಿಯಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರಿಂದ ಭಾರಿ ದರೋಡೆ..!?

ಮೆಲ್ಬೋರ್ನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಸ್ಟ್ರೇಲಿಯಾದಲ್ಲಿ ಶಾಪಿಂಗ್​ ಮಾಲ್​ನಲ್ಲಿ ದರೋಡೆ ಮಾಡಿದ್ದಾರೆ! ಅದು ಕೂಡ ಎರಡೆರಡು ಬಾರಿ..

ಅರೆ, ವಿಶ್ವದ ಅತಿಶ್ರೀಮಂತ ರಾಷ್ಟ್ರದ ಅಧ್ಯಕ್ಷರಾಗಿದ್ದೂ, ಆಸ್ಟ್ರೇಲಿಯಾದ ಶಾಪಿಂಗ್​ ಮಾಲ್​ನಲ್ಲಿ ಕಳ್ಳತನ ಮಾಡುವಂತ ದುರ್ದೆಸೆ ಡೊನಾಲ್ಡ್​ ಟ್ರಂಪ್​ಗೆ ಬಂದಿದ್ದಾದರೂ ಏಕೆ? ತಮಗೆ ಬೇಕು ಅಂದಿದ್ದರೆ ಆಸ್ಟ್ರೇಲಿಯಾ ಸರ್ಕಾರವೇ ಅತ್ಯಂತ ಜತನವಾಗಿ ಗಿಫ್ಟ್​ ಪ್ಯಾಕ್​ ಮಾಡಿ ಕಳುಹಿಸುತ್ತಿತ್ತಲ್ಲಾ ಎಂದು ಆಲೋಚಿಸುತ್ತಿದ್ದೀರಾ?

ಅದೇನೆಂದರೆ, ಈ ವ್ಯಕ್ತಿ ಡೊನಾಲ್ಡ್​ ಟ್ರಂಪ್​ ಅವರ ಮುಖವಾಡ ಧರಿಸಿ ಶಾಪಿಂಗ್​ ಮಾಲ್​ನಲ್ಲಿ ದರೋಡೆ ಮಾಡಿದ್ದಾನೆ. ಕದ್ದ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುವ ಯತ್ನದಲ್ಲಿ ಮುಖವಾಡ ಕಳಚಿ ಬಿದ್ದಿದ್ದರಿಂದ ಆತನ ನಿಜವಾದ ಮುಖದರ್ಶನವಾಗಿದೆ. ಸದ್ಯ ಆಸ್ಟ್ರೇಲಿಯಾ ಪೊಲೀಸರು ಈತನಿಗಾಗಿ ಶೋಧಿಸುತ್ತಿದ್ದಾರೆ.

ಕ್ವೀನ್ಸ್​ಲ್ಯಾಂಡ್​ ಪೊಲೀಸರು ಹೇಳಿದ್ದೇನು?
ಕಪ್ಪು ಬಣ್ಣದ ಹೂಡೆಡ್​ ನೈಕಿ ಜಂಪರ್​, ಕಪ್ಪು ಟ್ರ್ಯಾಕ್​ ಪ್ಯಾಂಟ್​ ಮತ್ತು ಬಿಳಿ ನೈಕಿ ಶೂ ಧರಿಸಿದ್ದ ವ್ಯಕ್ತಿಯೊಬ್ಬ ಕ್ವೀನ್ಸ್​ಲ್ಯಾಂಡ್​ನ ಜಿಂಪಿ ರಸ್ತೆಯಲ್ಲಿರುವ ಶಾಪಿಂಗ್​ ಸೆಂಟರ್​ಗೆ ನುಗ್ಗಿ ಅದರ ಗಾಜಿನ ಬಾಗಿಲನ್ನು ಒಡೆದು ಒಳನುಗ್ಗಿದ್ದಾನೆ. ಬಳಿಕ ಶಾಪಿಂಗ್​ ಸೆಂಟರ್​ನಲ್ಲಿದ್ದ ಚಿನ್ನಾಭರಣ ಮಳಿಗೆಯ ಶೋಕೇಸ್​ ಅನ್ನು ಒಡೆದು ಅದರಲ್ಲಿದ್ದ ಕೈಗಡಿಯಾರಗಳನ್ನು ಕದ್ದಿದ್ದಾನೆ. ಬಳಿಕ ಎಲೆಕ್ಟ್ರಾನಿಕ್ಸ್​ ವಸ್ತುಗಳ ಮಳಿಗೆಗೆ ಹೋಗಿ ಅಲ್ಲಿ ಕೈಗೆ ಸಿಕ್ಕಿದ ವಸ್ತುಗಳನ್ನು ಕದ್ದು ಪರಾರಿಯಾಗಲು ಯತ್ನಿಸುತ್ತಾನೆ. ಆಗ ಆತ ಧರಿಸಿದ್ದ ಡೊನಾಲ್ಡ್​ ಟ್ರಂಪ್​ ಮುಖವಾಡ ಕಳಚಿ ಬೀಳುತ್ತದೆ.

ಸಿಸಿ ಕ್ಯಾಮರಾದಲ್ಲಿ ಆತನ ನಿಜವಾದ ಚಹರೆ ರೆಕಾರ್ಡ್​ ಆಗಿದೆ. ನೋಡಲು ಆತ ಪೆಸಿಫಿಕ್​ ದ್ವೀಪ ರಾಷ್ಟ್ರದವನಂತೆ ಕಾಣಿಸುತ್ತಾನೆ. ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಕ್ವೀನ್ಸ್​ಲ್ಯಾಂಡ್​ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)