ಧಾರವಾಡ ಕಟ್ಟಡ ಅವಶೇಷಗಳಡಿಯಿಂದ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಯುವಕ!

ಧಾರವಾಡ: ಮಂಗಳವಾರ ಕುಸಿದಿದ್ದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಯುವಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಶುಕ್ರವಾರ ಬೆಳಗ್ಗೆ ಬದುಕಿ ಬಂದಿದ್ದಾನೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅವಶೇಷಗಳ ಅಡಿಯಿಂದ 24 ವರ್ಷದ ಸೋಮನಗೌಡ (ಸಂಗನಗೌಡ) ಅವರನ್ನು ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಿಸಿದ್ದಾರೆ. ಅವಶೇಷಗಳನ್ನು ಹೊರತೆಗೆಯುತ್ತಲೇ ಯುವಕ ನಡೆದು ಹೊರಬಂದಿದ್ದಾನೆ.

ಧಾರವಾಡ ತಾಲೂಕು ಉಳಿಗೇರಿ ಗ್ರಾಮದ ನಿವಾಸಿಯಾದ ಈತ ಕಟ್ಟಡದಲ್ಲಿದ್ದ ಜೆಡಿಎಸ್​ನ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್​ ಜಮನಾಳ ಅವರ ಕಚೇರಿಯಲ್ಲಿ ಸಹಾಯಕನಾಗಿದ್ದ. ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ ಆತ ಕಚೇರಿಯಲ್ಲೇ ಇದ್ದ ಎಂದು ತಿಳಿದು ಬಂದಿದೆ.

ಬದುಕುವ ಆಸೆಯನ್ನೇ ಕಳೆದುಕೊಂಡಿದ್ದೆ

ನನ್ನ ಮೇಲೆ ಒಂದು ಗೇಣು ಎತ್ತರದಲ್ಲಿ ಗೋಡೆ ಇತ್ತು. ಅದು ಕುಸಿದಿದ್ದರೆ ನಾನು ಸಾಯುತ್ತಿದ್ದೆ. ಅತ್ತಿತ್ತ ಸರಿದಾಡಲೂ ಜಾಗ ಇರಲಿಲ್ಲ. ನಾನು ಬದುಕಿ ಬರುವ ಆಸೆಯನ್ನೇ ಕಳೆದುಕೊಂಡಿದ್ದೆ. ನಮ್ಮ ಕಚೇರಿ ಪಕ್ಕದ ಅಂಗಡಿಯಲ್ಲಿ ಒಬ್ಬ ವೃದ್ಧರು ಇದ್ದರು ಅವರು 2 ದಿನ ಮಾತನಾಡುತ್ತಿದ್ದರು. ಆ ನಂತರ ಅವರ ಮಾತೂ ಕೇಳುತ್ತಿರಲಿಲ್ಲ. ಆ ನಂತರ ನಾನೊಬ್ಬನೇ ಆ ಸ್ಥಳದಲ್ಲಿ ಇದ್ದೆ ಎಂದು ನಾಲ್ಕು ದಿನಗಳ ಕಾಲ ಜೀವ ಉಳಿಸಿಕೊಂಡು ಹೊರ ಬಂದ ಯುವಕ ದಿಗ್ವಿಜಯ ನ್ಯೂಸ್​ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *