ಶಿರಸಿ: ಕಳ್ಳತನ, ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿ ನಿರೀಕ್ಷಣಾ ಜಾಮೀನು ಪಡೆದು ಕಳೆದ 13 ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ನಗರದ ಮಾರುಕಟ್ಟೆ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಂಗಳೂರಿನ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟಾದ ನಿತಿನ್ ಅಶೋಕ ರಾವ್ ಬಂಧಿತ ಆರೋಪಿ. ಈತನನ್ನು 2012ರಲ್ಲಿ ಶಿರಸಿಯ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದ ಬಳಿಕ ಪುನಃ ನ್ಯಾಯಾಲಯಕ್ಕೆ ಹಾಜರಾಗದ ಈತ, ಆಧಾರ ಕಾರ್ಡ್‌ನಲ್ಲಿ ಹೆಸರು ಬದಲಿಸಿಕೊಂಡು ಧಾರವಾಡ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಮತ್ತಿತರೆಡೆ ತೆರಳಿ ಅಲ್ಲಿಯೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ.
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ, ಧಾರವಾಡದ ಜಿಲ್ಲಾ ಸಬ್ ಅರ್ಬನ್ ಪೊಲೀಸ್ ಠಾಣೆ, ಬೆಂಗಳೂರಿನ ದೇವನಳ್ಳಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದವು. ಈತನ ಬಂಧನಕ್ಕೆ ಜಾಲ ಬೀಸಿದ್ದ ಶಿರಸಿಯ ಮಾರುಕಟ್ಟೆ ಠಾಣೆ ಪೊಲೀಸರು ಬೆಂಗಳೂರಿನ ವಿಶ್ವೇಶ್ವರ ಲೇ ಔಟ್‌ನಲ್ಲಿ ಬುಧವಾರ ಬೆಳಗ್ಗೆ ಬಂಧಿಸಿ ಕರೆತಂದಿದ್ದಾರೆ.