ತುಂಗಭದ್ರಾ ನದಿಯಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

ತಾಲೂಕಿನ ಬೈರನಪಾದದ ಬಳಿ ತುಂಗಭದ್ರಾ ನದಿಯಲ್ಲಿ ಹಿರೇಕೆರೂರ ತಾಲೂಕಿನ ತಾವರಗಿ ಗ್ರಾಮದ ವ್ಯಕ್ತಿಯೋರ್ವನ ಶವ ಬುಧವಾರ ಪತ್ತೆಯಾಗಿದ್ದು, ಘಟನೆ ಕುರಿತು ಅನುಮಾನ ವ್ಯಕ್ತವಾಗಿದೆ.

ದಿಗ್ಗೆಪ್ಪ ಚನ್ನಬಸಪ್ಪ ಗಿರಿಮಲ್ಲಪ್ಪನವರ (33) ಮೃತ ವ್ಯಕ್ತಿ, ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಕ್ರಾಂತಿ ನಿಮಿತ್ತ ಮಂಗಳವಾರ ಬೆಳಗ್ಗೆ 10.30ರ ಸಮಯದಲ್ಲಿ ತಾವರಗಿ ಗ್ರಾಮದ ಸ್ನೇಹಿತರಾದ ರುದ್ರೇಶ ಕೊಳ್ಳೇರ, ದೊಡ್ಡಗೌಡ ಶಿವಪ್ಪಳವರ, ತಾವರಗಿ ಗ್ರಾ.ಪಂ. ಅಧ್ಯಕ್ಷ ಶಂಕ್ರಗೌಡ ಅಬಲೂರ, ಗ್ರಾ.ಪಂ. ಮಾಜಿ ಸದಸ್ಯ ಶಂಕ್ರಗೌಡ ಅಜಪ್ಪನವರ ಜತೆ ಬೈರನಪಾದದ ಬಳಿ ಇರುವ ತುಂಗಭದ್ರ ನದಿಗೆ ಹೋಗಿದ್ದಾರೆ. ರಾತ್ರಿ 10 ಗಂಟೆಯಾದರೂ ದಿಗ್ಗೆಪ್ಪ ಮತ್ತು ಅವರ ಸ್ನೇಹಿತರು ಗ್ರಾಮಕ್ಕೆ ಬಂದಿರಲಿಲ್ಲ. ಇದಾದ ಕೆಲ ಸಮಯದಲ್ಲೇ ದಿಗ್ಗೆಪ್ಪ ನದಿಯಲ್ಲಿ ಮುಳಗಿದ್ದಾನೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ನೀಡಿದ್ದಾರೆ.

ಮೃತನ ಕುಟುಂಬದವರು ಘಟನೆ ಕುರಿತು ಮಾಹಿತಿ ಪಡೆಯಲೆಂದು ಆತನ ಜತೆ ತೆರಳಿದ್ದ ಸ್ನೇಹಿತರಿಗೆ ಕರೆ ಮಾಡಿದರೆ ಅವರ ಮೊಬೈಲ್​ಗಳು ಸ್ವಿಚ್​ಆಫ್ ಆಗಿವೆ. ಬುಧವಾರ ಬೆಳಗ್ಗೆ ಸ್ಥಳೀಯ ಈಜುಗಾರರು ಮತ್ತು ಹಿರೇಕೆರೂರು ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ಶರೀರವನ್ನು ಹೊರ ತೆಗೆದಿದ್ದಾರೆ.

ಸೂಕ್ತ ತನಿಖೆಗೆ ಆಗ್ರಹ: ದಿಗ್ಗೆಪ್ಪ ನೀರಿನಲ್ಲಿ ಮುಳುಗಿದ್ದಾನೆ ಎಂದು ಅವರ ಸ್ನೇಹಿತರಾರೂ ನಮಗೆ ತಿಳಿಸಿಲ್ಲ. ಇಲ್ಲವೆ ಅವರೇ ನಮ್ಮ ಹುಡಗನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರಬಹುದು ಎಂದು ಮೃತನ ಚಿಕ್ಕಪ್ಪ ಮಲ್ಲಿಕಾರ್ಜುನ ಗಿರಿಮಲ್ಲಪ್ಪನವರ ಅನುಮಾನ ವ್ಯಕ್ತಪಡಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮೃತನ ತಂದೆ ಚನ್ನಬಸಪ್ಪ ಗಿರಿಮಲ್ಲಪ್ಪನವರ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.