ಮೊಬೈಲ್‌ ಕಳ್ಳರೆಂದು ವ್ಯಕ್ತಿಯನ್ನು ಹೊಡೆದು ಸಾಯಿಸಿದ ಜನರ ಗುಂಪು

ನವದೆಹಲಿ: ಮೊಬೈಲ್‌ ಕಳ್ಳನೆಂದು ಭಾವಿಸಿ ಜನಸಮೂಹ ವ್ಯಕ್ತಿಯನ್ನು ಹೊಡೆದು ಸಾಯಿಸಿರುವ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ನಡೆದಿದೆ.

ಮೊಬೈಲ್‌ ಕಳ್ಳತನ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಸುಮಾರು 20 ಜನರ ಬುಡಕಟ್ಟು ತಂಡ ನಿನ್ನೆ ರಾತ್ರಿ ದಾಳಿ ನಡೆಸಿದೆ. ಈ ವೇಳೆ ಓರ್ವ ಮೃತಪಟ್ಟು, ಆತನ ಸ್ನೇಹಿತನಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗಲೂ ಜನರ ತಂಡ ಮನಬಂದಂತೆ ವ್ಯಕ್ತಿಗಳನ್ನು ಥಳಿಸುತ್ತಿದ್ದರು. ಅವರಿಂದ ಇಬ್ಬರನ್ನು ರಕ್ಷಿಸಲು ಮುಂದಾಗುವಷ್ಟರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ.

ಮೃತನನ್ನು ಅಜ್ಮಲ್‌ ವಾಹೋನಿಯಾ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ 25 ವರ್ಷದ ಭಾರು ಮಾತುರ್‌ ಎಂಬಾತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪ್ರಕರಣದ ತನಿಖೆ ವೇಳೆ ಮೃತ ಅಜ್ಮಲ್‌ ವಿರುದ್ಧ ಈಗಾಗಲೇ ಸುಲಿಗೆ ಸೇರಿ ಇತರೆ 32 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)