16 ದಿನ ಬೆವರು ಸುರಿಸಿ, 18 ಅಡಿ ಬಾವಿ ತೋಡಿ ನೀರು ಹರಿಸಿದ ಆಧುನಿಕ ಭಗೀರಥ

ಬೆಳ್ಮಣ್: ಭಾರಿ ಗಾತ್ರದ ಮಷಿನ್‌ಗಳನು ತರಿಸಿ ಸಲೀಸಾಗಿ ಸಾವಿರಗಟ್ಟಲೆ ಅಡಿಗಳಷ್ಟು ಬೋರ್‌ವೆಲ್ ಕೊರೆಸುವ ಈ ಕಾಲಘಟ್ಟದಲ್ಲಿ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಪ್ರತೀ ನಿತ್ಯ ಹಗಲು ಹೊತ್ತಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡಿ ಪ್ರತೀ ದಿನ ತನ್ನ 5 ಸೆಂಟ್ಸ್ ಜಾಗದಲ್ಲಿ ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಸ್ವಲ್ಪ ಸ್ವಲ್ಪವೇ ಮಣ್ಣು ಅಗೆದು ಒಟ್ಟು 18 ಅಡಿ ಬಾವಿ ತೋಡಿ ಎರಡು ಅಡಿ ನೀರು ಪಡೆದಿದ್ದಾರೆ. ಜತೆಗೆ ಪಕ್ಕದ ಮೂರು ಮನೆಗಳಿಗೂ ಜಲಪೂರೈಕೆ ಮಾಡುತ್ತಿದ್ದಾರೆ. ಇವರ ಈ ಶ್ರಮ ಸಾಧನೆ ಸಾರ್ವಜನಿಕರ ಶ್ಲಾಘನೆಗೂ ಪಾತ್ರವಾಗಿದೆ.

ಜಾಗ ಪಡೆದು ಬಾವಿ ಅಗೆದರು!: ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ 32ರ ಪ್ರಾಯದ ಭುವನೇಶ ಗೌಡ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾವಂಜಿಗುಡ್ಡೆ ಎಂಬಲ್ಲಿ ವಾಸಿಸುತ್ತಿದ್ದು, ಹಲವು ವರ್ಷಗಳಿಂದ ನೀರಿನ ತೊಂದರೆ ಅನುಭವಿಸಿದ್ದರು. ಈ ಪರಿಸರದಲ್ಲಿ ಸರ್ಕಾರಿ ಸೈಟುಗಳ ಜನರೂ ನೀರಿನ ತೊಂದರೆ ಅನುಭವಿಸಿ ಜಾಗ ಮಾರಲಾರಂಭಿಸಿದಾಗ ಭುವನೇಶ ತಾನೂ ಒಂದು ಸೈಟು ಖರೀದಿಸಿದ್ದರು. ಆ ಬಳಿಕ ನೀರಿನ ಸಮಸ್ಯೆ ಕಂಡು ತಾನೇ ದಿನ ನಿತ್ಯ ಸಂಜೆ ಬಾವಿ ತೋಡುವುದಕ್ಕಾರಂಭಿಸಿ ಯಶ ಕಂಡರು.

ಶ್ರಮ ತೋರಿದ ಪವಾಡ: ಮುಂಡ್ಕೂರು ಗ್ರಾಮ ಪಂಚಾಯಿತಿ ಸಚ್ಚೇರಿಪೇಟೆ ಪಾವಂಜಿಗುಡ್ಡೆ ಸೈಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಿದ್ದು, ತೋಡಿದ್ದ ಬಾವಿಗಳಲ್ಲಿ 10-15 ಅಡಿಗಳಲ್ಲಿ ಬಂಡೆಯೇ ಬಂದಿರುವಾಗ ಏಕಾಂಗಿಯಾಗಿ ಶ್ರಮ ವಹಿಸಿ ತೋಡಿದ ಭುವನೇಶ ಅವರ ಬಾವಿಯಲ್ಲಿ ಜಲಧಾರೆ ಸಿಕ್ಕಿರುವುದು ಪವಾಡ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಕ್ಯಾಂಡಲ್ ಹಿಡಿದು ಬಾವಿ ತೋಡಿದರು!: ಈ ಹಿಂದೆ ಶಾಲೆ ರಜಾ ದಿನಗಳಲ್ಲಿ ಬಾವಿ ತೋಡುವ ಕೆಲಸ ಮಾಡುವ ಗುತ್ತಿಗೆದಾರರ ಬಳಿ ಕೆಲಸ ಮಾಡಿದ್ದ ಅನುಭವವೇ ಇಲ್ಲಿ ಸಹಕಾರಿಯಾಯಿತು ಎನ್ನುತ್ತಾರೆ ಭುವನೇಶ. ಪ್ರತಿದಿನ ಕೂಲಿ ಕೆಲಸ ಮಾಡಿ ಸುಸ್ತಾಗಿ ಮನಗೆ ಬಂದು ವಿರಮಿಸುವವರ ನಡುವೆ ಭುವನೇಶ್ ಕೂಲಿ ಮಾಡಿ ಮನೆ ಬಂದು ಸಂಜೆಯಿಂದ ರಾತ್ರಿಯವರೆಗೆ ಬಾವಿ ತೋಡುವ ಸಾಹಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ. ಭುವನೇಶ್ ಅವರ ಬಾವಿ ತೋಡುವ ಕೆಲಸ ಕತ್ತಲಾದರೂ ನಿಲ್ಲುತ್ತಿರಲಿಲ್ಲ. ಕೆಲವೊಂದು ಬಾರಿ ಕ್ಯಾಂಡಲ್ ಹಿಡಿದು ಬಾವಿ ತೋಡಿದ ನಿದರ್ಶನವೂ ಇದೆ.

ಒನ್ ಮ್ಯಾನ್ ಆರ್ಮಿ: ಸಾಮಾನ್ಯವಾಗಿ ಬಾವಿ ಕೆಲಸಕ್ಕೆ ಸುಮಾರು 5 ರಿಂದ 6 ಮಂದಿ ಕಾರ್ಮಿಕರು ಅಗತ್ಯ. ಮಣ್ಣು ಅಗೆದು ತುಂಬಿಸುವುದಕ್ಕೆ ಹಾಗೂ ಎಳೆದು ತರುವುದಕ್ಕೆ ಕಾರ್ಮಿಕರ ಅಗತ್ಯ ವಿದೆ. ಆದರೆ ಇಲ್ಲಿ ಭುವನೇಶ್ ತಾನೊಬ್ಬನೇ ಮಣ್ಣು ಅಗೆದು, ಏಣಿ ಮೂಲಕ ಬುಟ್ಟಿಯಲ್ಲಿ ಮಣ್ಣು ತುಂಬಿಸಿ ಹೊತ್ತು ತಂದು 18 ಅಡಿ ಬಾವಿ ತೋಡಿರುವುದು ನಿಜಕ್ಕೂ ಎಲ್ಲರ ಹುಬ್ಬೇರುವಂತೆ ಮಾಡಿದೆ.

ನೀರಿನ ಸಮಸ್ಯೆ ಅರಿತು ಬಾವಿ ತೋಡುವ ಸಾಹಸಕ್ಕೆ ಕೈ ಹಾಕಿದ್ದೇನೆ. ದೇವರ ದಯೆಯಿಂದ ನೀರು ಕೂಡ ಸಿಕ್ಕಿರುವುದು ಬಹಳ ಖುಷಿಯಾಗಿದೆ. ನಮ್ಮ ಕುಡಿಯುವ ನೀರಿನ ಸಮಸ್ಯೆ ದೂರವಾಗಿರುವುದರ ಜತೆ ಇತರ ಎರಡು-ಮೂರು ಮನೆಗಳಿಗೂ ನೀರು ನೀಡುತ್ತೇನೆ ಎಂಬ ಹೆಮ್ಮೆ ಇದೆ.
|ಭುವನೇಶ್, ಬಾವಿ ತೋಡಿದ ಯುವಕ

ದಿನ ನಿತ್ಯ ಕೂಲಿ ಕೆಲಸ ಮಾಡಿ ಬರುವ ಭುವನೇಶ್ ಸುಸ್ತಾದರೂ ಛಲ ಬಿಡದೆ ಪ್ರತೀ ದಿನ ಸಂಜೆಯಿಂದ ರಾತ್ರಿಯವರೆಗೆ ಮಣ್ಣು ಅಗೆದು, ಮಣ್ಣು ಹೊತ್ತು ಕೊಂಡು ಏಣಿ ಹತ್ತಿ ಮೇಲೆ ಬರುವಾಗ ನನ್ನ ಕರುಳು ಚುರುಕ್ ಅನ್ನುತ್ತಿತ್ತು. ಈ ಯುವಕನ ಸಾಧನೆ ಇತರರಿಗೆ ಮಾದರಿ.
|ವಿಠಲ ಶೆಟ್ಟಿ, ಸ್ಥಳಿಯ ನಿವಾಸಿ.