ತಿಲಕ ಇಡುವುದೊಂದೆ ಧರ್ಮನಿಷ್ಠೆಯಲ್ಲ ಅಮಿತ್​ ಬಾಬು, ಮೋದಿ ಬಾಬು ನನ್ನೊಂದಿಗೆ ಸ್ಪರ್ಧೆಗೆ ಇಳಿಯಲಿ: ಮಮತಾ ಸವಾಲು

ಕೋಲ್ಕತ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಬ್ಬರದ ಪ್ರಚಾರದ ನಡುವೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇವಲ ತಿಲಕ ಇಡುವುದನ್ನೇ ಧರ್ಮನಿಷ್ಠೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ತಿಲಕ ಇಡುವುದೊಂದೇ ಪೂಜೆಯಲ್ಲ. ಬೇಕಾದರೆ ಅಮಿತ್​ ಬಾಬು ಹಾಗೂ ಮೋದಿ ಬಾಬು ನನ್ನೊಂದಿಗೆ ಸ್ಪರ್ಧೆಗೆ ಇಳಿಯಲಿ, ಯಾರಿಗೆ ಹೆಚ್ಚು ಸಂಸ್ಕೃತ ಮಂತ್ರ ಗೊತ್ತಿದೆ ಎಂಬುದನ್ನು ನೋಡೋಣ ಎಂದು ಸವಾಲು ಹಾಕಿದ್ದಾರೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಬಿಜೆಪಿ ಹಾಗೂ ಟಿಎಂಸಿ ಪಕ್ಷದ ನಡುವೆ ಸಂಸ್ಕೃತ ಮಂತ್ರದ ಮೇಲೆ ವಾಕ್ಸಮರವೇ ನಡೆಯುತ್ತಿದೆ. ನಿನ್ನೆ ಸೋಮವಾರವಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿ ದೋಲ್ಜಾತ್ರಾ ಹಾಗೂ ಹೋಳಿ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ನಿರ್ವಹಣೆ ಮಾಡಬೇಕು. ಈ ಸಮಯದಲ್ಲಿ ಶಾಂತಿಗೆ ಭಂಗ ತರುವ ಪ್ರಯತ್ನ ನಡೆಯುವ ಸಾಧ್ಯತೆ ಇದ್ದು, ಯಶಸ್ವಿಯಾಗದಂತೆ ಜನರು ಜಾಗ್ರತೆ ವಹಿಸಬೇಕೆಂದು ಮಮತಾ ಅವರು ಮನವಿ ಮಾಡಿದರು.

ಶಾಂತಿ ಮನೋಭಾವದ ವಾತವರಣದೊಂದಿಗೆ ನಾವು ಹೋಳಿ ಹಬ್ಬವನ್ನು ಸಂಭ್ರಮಿಸೋಣ ಎಂದ ಮಮತಾ ಅವರು ದುರ್ಗಾ ಪೂಜಾ ಹಾಗೂ ಛಾತ್​ ಹಬ್ಬಕ್ಕೆ ರಜಾದಿನವನ್ನಾಗಿ ಘೋಷಿಸಿರುವುದಾಗಿ ತಿಳಿಸಿದರು. ಅಲ್ಲದೆ, ಬುದ್ಧ ಜಯಂತಿ, ಗುರುನಾನಕ್​ ಜಯಂತಿ ಹಾಗೂ ಈದ್​ ಸಂಭ್ರಮಕ್ಕೂ ರಜೆ ಘೋಷಣೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ವಿಭಿನ್ನ ಧರ್ಮಗಳು ಹಾಗೂ ಸಮುದಾಯಗಳು ಜೀವನ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಶಾಂತಿಗೆ ಧಕ್ಕೆ ಉಂಟಾಗದಂತೆ ನಾವು ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದರು.

ಈ ಹಿಂದೆಯೇ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿರುವ ಮಮತಾ ಅವರು ಈ ಚುನಾವಣೆ ಮಮತಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಹೋರಾಟವಾಗಿದೆ. ಬಿಜೆಪಿ ವಿಭಜನೆಯ ರಾಜಕೀಯ ತಂತ್ರದಿಂದ ದೇಶವನ್ನು ರಕ್ಷಣೆ ಮಾಡುವುದಕ್ಕಾಗಿ ಈ ಚುನಾವಣೆ ನಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದರು. (ಏಜೆನ್ಸೀಸ್​)